ಗುತ್ತಿಗಾರಿನ ಯುವಕನೊಬ್ಬನನ್ನು ಆಂಧ್ರ ಪೋಲೀಸರು ಕಾರಲ್ಲಿ ಎತ್ತಿ ಹಾಕಿಕೊಂಡು ಹೋದ ಹಾಗೂ ಊರಿನ ಯುವಕನನ್ನು ಯಾರೋ ಅಪಹರಣ ಮಾಡಿದ್ದಾರೆಂದು ತಿಳಿದು ಊರವರು ಬೆನ್ನಟ್ಟಿ ವಾಹನವನ್ನು ತಡೆದು ಬಳಿಕ ಸುಬ್ರಹ್ಮಣ್ಯ ಠಾಣೆಯಲ್ಲಿ ಮಾತುಕತೆ ನಡೆದು ಆಂಧ್ರ ಪೋಲೀಸರಿಂದ ಯುವಕನನ್ನು ವಾಪಸ್ ಕರೆತಂದ ಘಟನೆ ವರದಿಯಾಗಿದೆ.
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ವಳಲಂಬೆಯ ಸಚಿನ್ ಮೊಟ್ಟೆಮನೆ ಎಂಬವರು ಗುತ್ತಿಗಾರಿನಲ್ಲಿರುವಾಗ ಆಂದ್ರ ಪೋಲೀಸರು ಬಂದು ಅವರನ್ನು ತಮ್ಮ ಕಾರಲ್ಲಿ ಕೂರಿಸಿಕೊಂಡು ಕರೆದೊಯ್ದರೆನ್ನಲಾಗಿದೆ.
ಯಾರೋ ಸಚಿನ್ ರನ್ನು ಅಪಹರಣ ಮಾಡಿದ್ದಾರೆಂದು ತಿಳಿದು ಊರವರು ಸಚಿನ್ ರ ಮಾವ ವೆಂಕಟ್ ವಳಲಂಬೆಯವರಿಗೆ ತಿಳಿಸಿದರೆಂದೂ, ವಿಷಯ ಗುಂಡ್ಯ ಸಮೀಪದ ಮಿತ್ರರಿಗೆ ತಿಳಿಯಿತೆಂದೂ ಅವರು ಆಂಧ್ರ ಪೋಲೀಸರ ವಾಹನವನ್ನು ತಡೆದು ನಿಲ್ಲಿಸಿದರೆಂದೂ, ಆ ವೇಳೆಗೆ ಗುತ್ತಿಗಾರಿನಿಂದ ಹೋದ ಜನರೂ ಅಲ್ಲಿಗೆ ತಲುಪಿದರೆಂದೂ ಹೇಳಲಾಗುತ್ತಿದೆ.
ಜನರಿಗೂ ಆಂಧ್ರ ಪೋಲೀಸರಿಗೂ ಮಾತಿನ ಚಕಮಕಿ ನಡೆದಾಗ ಸುಬ್ರಹ್ಮಣ್ಯ ಪೋಲೀಸರು ಆಗಮಿಸಿ ಅವರೆಲ್ಲರನ್ನೂ ಪೋಲೀಸ್ ಠಾಣೆಗೆ ಕರೆತಂದರೆಂದೂ, ಬಳಿಕ ಠಾಣೆಯಲ್ಲಿ ವೆಂಕಟ್ ವಳಲಂಬೆ ಉಪಸ್ಥಿತಿಯಲ್ಲಿ ಮಾತುಕತೆ ನಡೆದು, ವಿಚಾರಣೆಗೆ ಬರಬೇಕೆಂಬ ಶರತ್ತು ವಿಧಿಸಿ ಸಚಿನ್ ರನ್ನು ಬಿಟ್ಟು ಹೋದರೆಂದೂ ಹೇಳಲಾಗುತ್ತಿದೆ.
ಆನೈನ್ ಗೇಮಿಂಗ್ ನಡೆಸುವ ಬುಕ್ಕಿಯೊಬ್ಬನ ಫೋನ್ ಸಿಮ್ ನಲ್ಲಿ ಸಚಿನ್ ಮೊಟ್ಟೆಮನೆ ಹೆಸರು ಕಂಡುಬಂದುದರಿಂದ ಇವರೂ ಆ ವ್ಯವಹಾರದಲ್ಲಿ ಭಾಗಿಯಾಗಿರಬಹುದೆಂಬ ಭಾವನೆಯಿಂದ ಆಂಧ್ರ ಪೋಲೀಸರು ಸಚಿನ್ ರನ್ನು ವಿಚಾರಣೆಗಾಗಿ ಕರೆದೊಯ್ಯಲು ಪ್ರಯತ್ನಿಸಿದ್ದರೆಂದು ತಿಳಿದುಬಂದಿದೆ. ಅವರು ಮಧ್ಯಾಹ್ನವೇ ಗುತ್ತಿಗಾರಿಗೆ ಬಂದಿದ್ದರೆಂದೂ, ಸಚಿನ್ ಮೊಟ್ಟೆಮನೆ ಎಲ್ಲಿರುತ್ತಾರೆ ?
ಅವರಿಂದ ಅಡಿಕೆ ಸಸಿ ಪಡೆಯಲು ನಾವು ಬಂದಿದ್ದೇವೆ ಎಂದು ಕೆಲವರೊಡನೆ ಹೇಳಿದ್ದರೆಂದೂ ತಿಳಿದುಬಂದಿದೆ.



























