ಕೊಡಗು: ಮಹಾರಾಷ್ಟ್ರ ಹಾಗೂ ಕೇರಳಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಕರ್ನಾಟಕ ಪ್ರವೇಶಕ್ಕೆ ಆರ್‌ಟಿಪಿಸಿಆರ್ ಪ್ರಮಾಣ ಪತ್ರ ಕಡ್ಡಾಯವಾಗಿದ್ದು, ಈ ನಿಟ್ಟಿನಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಜಾರಿಗೆ ಬಂದಿದೆ.
ಕೋವಿಡ್ -19 ನಿಯಂತ್ರಿಸಲು ಇದೇ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಕೇರಳ ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ ಮಾಡಲು ಪ್ರಾರಂಭಿಸಿದ್ದು, ಈ ನಡುವೆ ಕೇರಳಿಗರು ತರುತ್ತಿರುವ ನಕಲಿ ಆರ್‌ಟಿಪಿಸಿಆರ್ ಪ್ರಮಾಣಪತ್ರ ಪತ್ತೆ ಹಚ್ಚುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.
ಜಿಲ್ಲೆ ಪ್ರವೇಶಿಸಲು ಒಳದಾರಿ ಸಮೇತ ಇತರ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದು ಇದರಲ್ಲಿ ಆರ್ ಟಿಪಿಸಿಆರ್ ಟೆಸ್ಟ್ ಗೆ ಒಳಗಾಗದೇ ನಕಲಿ ಆರ್ ಟಿಪಿಸಿಆರ್ ತರುತ್ತಿರುವುದು ಸಹ ಒಳಗೊಂಡಿದೆ. ಕೊಡಗು-ಕೇರಳ ಗಡಿಯುದ್ದಕ್ಕೂ ಅವಶ್ಯಕ ಸಾಮಾಗ್ರಿಗಳನ್ನು ಸಾಗಿಸುವ ಹಲವು ವಾಹನಗಳು ಸೇರಿದಂತೆ ಸುಮಾರು 300 ರಿಂದ 500 ವಾಹನಗಳು ನಿಯಮಿತವಾಗಿ ಪ್ರಯಾಣಿಸುತ್ತವೆ. ಈ ಎಲ್ಲಾ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ಕೇರಳದಾದ್ಯಂತದ ಕೋವಿಡ್-19 ಎರಡನೇ ಅಲೆ ಆರಂಭವಾಗಿದ್ದು, ಕರ್ನಾಟಕ ಸರ್ಕಾರ ರಾಜ್ಯದ ಎಲ್ಲ ಪ್ರವಾಸಿಗರಿಗೆ 72 ಗಂಟೆಗಳಿಗಿಂತ ಮುಂಚೆ ಪಡೆದ ಆರ್‌ಟಿಪಿಸಿಆರ್ ವರದಿ ಹೊಂದಿರುವುದು ಕಡ್ಡಾಯಗೊಳಿಸಿದೆ.