ಪುತ್ತೂರು: ತಾಯಿ ಭಾರತಿ ಎಲ್ಲರಿಗೂ ತಾಯಿ. ಗಾಳಿ, ನೀರು, ಮಣ್ಣು ಇವುಗಳಲ್ಲಿ ಬೇಧವಿಲ್ಲದೆ, ಭೇದ ಮಾಡದೆ ನಮ್ಮಲ್ಲೆರನ್ನು ಏಕದೃಷ್ಟಿಯಿಂದ ಸಲಹುವ ಮಹಾಮಾತೆ. ಇಂಥ ಮಾತೆಯನ್ನು ಅಂತಃಕರಣಪೂರ್ವಕವಾಗಿ ವಂದಿಸುವುದು, ಪೂಜಿಸುವುದು ನಮ್ಮ ಧರ್ಮವಾಗಿದೆ. ತಾಯಿ ಭಾರತೀಯ ಗುಣಗಾನವನ್ನು ಕೇಳಿಸುವ ಮೂಲಕ ನಮ್ಮಲ್ಲಿ ಮಾತೃಶಕ್ತಿಯ ಪ್ರೀತಿಯನ್ನು ಉದ್ದೀಪನಗೊಳಿಸಲಿದೆ “ಜಾಗೋ ಹಿಂದುಸ್ಥಾನಿ”, ಇದೊಂದು ಅವಿಸ್ಮರಣೀಯ ರಸಸಂಜೆಯಾಗಿದೆ.
ಎ.11 ರಂದು ಸಂಜೆ ಸಂಸ್ಕಾರ ಭಾರತಿ ಪುತ್ತೂರು ಸಂಯೋಜನೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹ ಸಂಸ್ಥೆಯಾಗಿರುವ ರೇಡಿಯೋ ಪಾಂಚಜನ್ಯ ಸಹಕಾರದಿಂದ ಈ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವದ ಸಂದರ್ಭದಲ್ಲಿ ಜಾತ್ರೆ ಗದ್ದೆಯಲ್ಲಿ ಸಾಕಾರಗೊಳ್ಳಲಿದೆ.
ನಿದ್ರಿಸುತ್ತಿರುವ ಜಡಮನಸ್ಸಿನ ಆಳದಲ್ಲಿರುವ ಜೀವಚೈತನ್ಯವನ್ನು ಬಡಿದೆಬ್ಬಿಸುವ ಕ್ಷಣವಾಗಲಿದೆ. ಹಾಡಿನ ಒಂದೊಂದು ಅಕ್ಷರವೂ ರಕ್ತದ ಕಣಕಣವನ್ನು ತಟ್ಟಿ “ದೇಶ ಪ್ರೇಮ”ಮಾತೃಭಕ್ತಿಯನ್ನು ಜಾಗೃತವಾಗಿಸಲಿದೆ. ಇದು ದೇಶ ವಿದೇಶ ಗಡಿನಾಡುಗಳನ್ನು ಮೀರಿ ದೇಶ ಪ್ರೀತಿಯ ದಿವ್ಯಾನುಭವಗಳ ರಸದೌತಣವನ್ನು ತಮ್ಮ ಕಂಠ ಮಾಧುರ್ಯದಿಂದ ಹರಿಸಲಿರುವ ಮಂಜುಳನಾದದ ಲೋಕವನ್ನು ಪರಿಚಯಿಸಲಿರುವ ತಂಡ “ಜಾಗೋ ಹಿಂದುಸ್ಥಾನಿ”.
ಏನಿದು “ಜಾಗೋ ಹಿಂದುಸ್ಥಾನಿ”?
ಬಹುವಿಧ ಸಂಸ್ಕೃತಿ, ಆಹಾರ, ಭಾಷೆ ಮೊದಲಾದ ವಿಶೇಷಗಳನ್ನು ತನ್ನದಾಗಿಸಿಕೊಂಡ ಭಾರತದಲ್ಲಿ, ವೇಗವಾಗಿ ಸಾಗುತ್ತಿರುವ ಈ ಧರ್ಮದಲ್ಲಿ ಪರಸ್ಪರ ವಿಶ್ವಾಸ, ಸಹೋದರತ್ವ, ಮಾನವ ಪ್ರೀತಿ, ಸಹೃದಯತೆ ಬಡವಾಗುವುದರ ಕುರಿತು ಚಿಂತಿಸಲಾದ ಸಹೃದಯ ತಂಡವೊಂದು ಚಿಂತಿಸಿದ, ತನ್ಮೂಲಕ ಅದನ್ನು ಸೃಷ್ಟಿಸಿದ ಕನಸಿನ ಪ್ರತೀಕವೇ “ಜಾಗೋ ಹಿಂದುಸ್ಥಾನಿ”.
ಸಂಗೀತದ ಮೂಲಕ ತಮ್ಮ ಮನದ ಆಳದ ಮೂಲೆಯಲ್ಲಿರುವ ಚಿಂತನೆಯನ್ನು ಸಾಕಾರಗೊಳಿಸಬಹುದು, ಮಾತ್ರವಲ್ಲದೆ ನಮ್ಮದೇ ರೀತಿಯ ದೇಶಭಕ್ತಿಯ ಸಿಂಚನಗೈಯಬಹುದೆಂಬುದನ್ನು ಅರ್ಥಮಾಡಿ, ಮಹಾರಾಷ್ಟದ ಕೊಲ್ಲಾಪುರದ 15 ಮಂದಿ ಹಾಡುಗಾರರ ತಂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಹಿಂದಿ ಚಲನಚಿತ್ರದಲ್ಲಿರುವ ದೇಶಭಕ್ತಿಯ ಅತ್ಯುತ್ತಮ ಚಲನಚಿತ್ರಗೀತೆಗಳ ರಸಸಂಜೆಯೇ “ಜಾಗೋ ಹಿಂದುಸ್ಥಾನಿ”. ಮನರಂಜನೆ ಹಾಗೂ ದೇಶಭಕ್ತಿ ಇವುಗಳ ಸಮ್ಮಿಲನವಾಗಿರುವ ಈ ಪ್ರಯೋಗ ದೇಶದಲ್ಲೇ ಅದ್ವಿತೀಯವೆನಿಸಿದೆ.
ಮಹಾರಾಷ್ಟ, ಕರ್ನಾಟಕ, ಗೋವಾ, ಪಶ್ಚಿಮ ಬಂಗಾಲ, ಬಿಹಾರ, ತಮಿಳುನಾಡು, ಆಂದ್ರಪ್ರದೇಶ, ಮದ್ಯಪ್ರದೇಶ ಹಾಗೂ ಗುಜರಾತ್ ಮುಂತಾದ ದೇಶದಾದ್ಯಂತ 3200, ಅಮೇರಿಕದಲ್ಲಿ 27ಕ್ಕಿಂತ ಹೆಚ್ಚು ಕಾರ್ಯಕ್ರಮಗಳನ್ನು ಸಾದರಪಡಿಸಿರುವ ಅದ್ಭುತ ವಾದ್ಯ ವೃಂದಗಳನ್ನೊಳಗೊಂಡ ಅಮೋಘ ಕಾರ್ಯಕ್ರಮ. ಮುಂಬಯಿ, ಕೋಲ್ಕತ್ತಾ, ಪುಣೆ, ಹೈದರಾಬಾದ್, ಚೆನೈ, ಬೆಂಗಳೂರು, ಮಂಗಳೂರು, ಪಣಜಿ, ರಾಜ್ಕೋಟ್, ನಾಸಿಕ್, ನಾಗ್ಪುರ, ಅಮರಾವತಿ, ಸೋಲಾಪುರ ಮುಂತಾದ ಪಟ್ಟಣಗಳಲ್ಲಿ ಪ್ರಚಂಡ ಪ್ರಶಂಸೆಗೆ ಪಾತ್ರವಾಗಿ ಜನಮನದಲ್ಲಿ ದೇಶಭಕ್ತಿಯು ಸದಾ ಅನುರಣನವಾಗುವಂತೆ ಮಾಡಿದ ಕಾರ್ಯಕ್ರಮವಾಗಿದೆ.