ಮಂಗಳೂರು: ಅಪಘಾತ ಸಂಭವಿಸಿ ಬೆಂಕಿ ತಗುಲಿದ ಪರಿಣಾಮ ಸಿಟಿ ಬಸ್ ಹಾಗೂ ಬೈಕ್ ಹೊತ್ತಿ ಊರಿದ ಘಟನೆ ನಗರದ ಹಂಪನಕಟ್ಟೆ ಬಳಿಯ ವೆನ್ಲಾಕ್ ಆಸ್ಪತ್ರೆ ಬಳಿ ಏ.8 ರಂದು ಮಧ್ಯಾಹ್ನ ನಡೆದಿದ್ದು, ಬೈಕ್ ಸವಾರ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಾಟಿಪಳ್ಳದಿಂದ ಮಿಲಾಗ್ರಿಸ್ ಆಗಿ ಸ್ಟೇಟ್‌ಬ್ಯಾಂಕ್ ಕಡೆಗೆ ಬರುತ್ತಿದ್ದ 45ಜಿ ಸಂಖ್ಯೆಯ ಖಾಸಗಿ ಸಿಟಿ ಬಸ್ ಹಂಪನಕಟ್ಟೆಯ ಸಿಗ್ನಲ್ ದಾಟುತ್ತಿದ್ದಂತೆ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಬಸ್‌ನಡಿಗೆ ಬಿದ್ದಿದೆ.
ಈ ವೇಳೆ ನಿಗದಿತ ವೇಗದಲ್ಲಿದ್ದ ಬಸ್ ಸವಾರನ ಸಮೇತ ಹಲವು ಮೀಟರ್ ಎಳೆದುಕೊಂಡು ಹೋಗಿದೆ.
ಬಸ್ ಎಳೆದುಕೊಂಡು ಹೋದ ರಭಸಕ್ಕೆ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡು ಏಕಾಏಕಿ ಬಸ್‌ನಡಿಗೆ ಬೆಂಕಿ ಹತ್ತಿಕೊಂಡಿದೆ. ಕ್ಷಣಮಾತ್ರದಲ್ಲಿ ಕೆಳಗೆ ಹತ್ತಿದ ಬೆಂಕಿ ಇಡೀ ಬಸ್‌ಗೆ ವ್ಯಾಪಿಸಿದೆ.
ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಪವಾಡ ಸದೃಶವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದು, ಈ ದೃಶ್ಯವು ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.