ಶಿವಮೊಗ್ಗ: ಕೊನೆಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ವಿಪಕ್ಷಗಳ ಒತ್ತಡಕ್ಕೆ ಮಣಿದು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನ ಘೋಷಣೆ ಮಾಡಿದ್ದಾರೆ. ಇಂದು ಸಂಜೆ ದಿಢೀರ್ ತುರ್ತು ಸುದ್ದಿಗೋಷ್ಟಿ ನಡೆಸಿ, ರಾಜೀನಾಮೆ ನಿರ್ಧಾರವನ್ನ ಪ್ರಕಟಿಸಿದ್ದಾರೆ. ನಾಳೆ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಸಂಜೆ ವೇಳೆಗೆ ರಾಜೀನಾಮೆ ನೀಡೋದಾಗಿ ತಿಳಿಸಿದ್ದಾರೆ.
ಗುತ್ತಿಗೆ ನೌಕರ ಸಂತೋಷ್ ಪಾಟೀಲ್ ಈ ಮೊದಲು ಕೆ.ಎಸ್.ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ಅದಾದ ಕೆಲವು ತಿಂಗಳ ಬಳಿಕ ಅಂದರೆ ಏಪ್ರಿಲ್ 12 ರಂದು ಉಡುಪಿಯ ಲಾಡ್ಜ್ ಒಂದರಲ್ಲಿ ಸಂತೋಷ್ ಪಾಟೀಲ್ ಮೃತದೇಹ ಪತ್ತೆಯಾಗಿತ್ತು. ಸಾವಿಗೂ ಮುನ್ನ ಸಂತೋಷ್ ಪಾಟೀಲ್ ಮಾಧ್ಯಮಗಳಿಗೆ ಕಳುಹಿಸಿದ್ದಾರೆ ಎನ್ನಲಾಗಿರುವ ಡೆತ್ನೋಟ್ನಲ್ಲಿ ಈಶ್ವರಪ್ಪ ಅವರ ಹೆಸರು ಇದೆ. .
ಹೀಗಾಗಿ ವಿರೋಧ ಪಕ್ಷಗಳು ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿದ್ದವು. ದೆಹಲಿ, ಬೆಂಗಳೂರು ಸೇರಿದಂತೆ ಅನೇಕ ಕಡೆ ಕಾಂಗ್ರೆಸ್ ನಾಯಕರು ತೀವ್ರ ಪ್ರತಿಭಟನೆ ನಡೆಸಿದ್ದವು. ಕೊನೆಗೂ ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದ ಈಶ್ವರಪ್ಪ ರಾಜೀನಾಮೆಯನ್ನ ಘೊಷಣೆ ಮಾಡಿದ್ದಾರೆ.