ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮತ್ತೆ 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣ ಮಾಸ್ಟರ್ ಮೈಂಡ್ ಎಂದೇ ಕರೆಯಲಾಗಿರುವ ಘಟನೆಯ ಪ್ರಮುಖ ರುವಾರಿ ಮೌಲ್ವಿ ವಾಸೀಂ ಪಠಾಣ್ ತಲೆ ಮರೆಸಿಕೊಂಡಿದ್ದಾನೆ. ಸದ್ಯ ಈತನ ವಿಡಿಯೋವೊಂದು ಬಿಡುಗಡೆಯಾಗಿದ್ದು, ಅಂದು ತಾನು ಗಲಭೆ ನಡೆದ ಸ್ಥಳಕ್ಕೆ ಏಕೆ ಹೋಗಿದ್ದೆ ಎಂಬುದನ್ನು ಆರೋಪಿ ತಿಳಿಸಿದ್ದಾನೆ.
ನನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿರುವ ವಾಸೀಂ ಪಠಾಣ್, ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾರನ್ನೂ ಪ್ರಚೋದಿಸುವ ಕೆಲಸ ಮಾಡಿಲ್ಲ. ನನ್ನನ್ನು ಮಾಸ್ಟರ್ ಮೈಂಡ್ ಅಂತ ಬಿಂಬಿಸಲಾಗುತ್ತಿದೆ.

ಜೀವ ಭಯದಿಂದಾಗಿ ನಾನು ಎಲ್ಲರ ಎದುರು ಬಂದಿಲ್ಲ. ನಾನು ಯಾರನ್ನೂ ಪ್ರಚೋದಿಸುವ ಕೆಲಸವನ್ನು ಮಾಡಿಲ್ಲ. ನಾನು ಅಲ್ಲಿಗೆ ಬಂದಾಗ ಗಲಭೆ ಆರಂಭ ಆಯ್ತು. ನಾನು ಎಲ್ಲರನ್ನೂ ಕೂಡ ಸಮಾಧಾನ ಮಾಡೋ ಪ್ರಯತ್ನ ಮಾಡಿದೆ. ಎಲ್ಲಿರಗೂ ತಮ್ಮ ತಮ್ಮ ಮನೆಗೆ ಹೋಗುವಂತೆ ಮಾಡಿದ್ದೆ.
ವಾಟ್ಸಾಪ್ನಲ್ಲಿ ಹಾಕಿದ ಸ್ಟೇಟಸ್ ಈ ಗಲಭೆಗೆ ಕಾರಣವಾಗಿದೆ. ನಾನು ಈ ಪ್ರಕರಣದಲ್ಲಿ ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಅಜ್ಞಾತ ಸ್ಥಳದಿಂದ ವಾಸೀಂ ಪಠಾಣ್ ವಿಡಿಯೋ ಹರಿಬಿಟ್ಟಿದ್ದಾನೆ.