ಮಾಣಿ: ಗ್ರಾಮ ಪಂಚಾಯತ್ ವ್ಯಾಪ್ತಿಯ ಲಕ್ಕಪ್ಪರಕೋಡಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಹಿಂದೂರುದ್ರಭೂಮಿಗೆ ಗುದ್ದಲಿಪೂಜೆ ನೆರವೇರಿತು.
ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಮಾಣಿಗುತ್ತು ಸಚಿನ್ ರೈಯವರು ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರುದ್ರಭೂಮಿ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಬದಿಗುಡ್ಡೆ ಜಗನ್ನಾಥ ಚೌಟರವರು, ರುದ್ರಭೂಮಿ ದೇವರ ಪುಣ್ಯ ಸ್ಥಳಗಳಿಗೆ ಸಮಾನ. ಯಜ್ಞ ಯಾಗಾದಿಗಳ ಬೂದಿಯಷ್ಟೆ ರುದ್ರಭೂಮಿಯ ದಫನದ ಬೂದಿಗೂ ಪಾವಿತ್ರ್ಯತೆ ಇದೆ. ರುದ್ರಭೂಮಿಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಎಲ್ಲರ ಸಹಕಾರವನ್ನು ನಿರೀಕ್ಷಿಸುತ್ತೇವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಅನೇಕ ವರ್ಷಗಳ ಜನರ ಬೇಡಿಕೆಯಾಗಿರುವ ನಮ್ಮ ಗ್ರಾಮದ ಸಾರ್ವಜನಿಕ ಹಿಂದೂ ರುದ್ರಭೂಮಿಯ ನಿರ್ಮಾಣ ಕಾರ್ಯಕ್ಕೆ ಕಾಲ ಕೂಡಿ ಬಂದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೊಡ್ಡ ಪ್ರಮಾಣದ ಸಹಕಾರ ಸಿಗಲಿದೆ. ಅದರ ಜೊತೆಗೆ ಸರ್ಕಾರದ ಮತ್ತು ಸಾರ್ವಜನಿಕರ ಸಹಕಾರದಿಂದ ಅತೀ ಶೀಘ್ರವಾಗಿ ಕೆಲಸ ಪೂರ್ತಿಗೊಳಿಸಲಾಗುವುದು ಎಂದರು.
ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಅಭಿವೃದ್ಧಿ ಅಧಿಕಾರಿ ಗಿರಿಜಾ, ಸದಸ್ಯರುಗಳಾದ ಮೆಲ್ವಿನ್ ಕಿಶೋರ್ ಮಾರ್ಟಿಸ್, ಇಬ್ರಾಹಿಂ.ಕೆ.ಮಾಣಿ, ರಮಣಿ, ನಾರಾಯಣ ಶೆಟ್ಟಿ, ಸುಜಾತ, ಸಮಿತಿಯ ಸದಸ್ಯರಾದ ಜಗದೀಶ್ ಜೈನ್, ಪ್ರಗತಿಬಂಧು ಸ್ವಸಹಾಯ ಸಂಘದ ಒಕ್ಕೂಟದ ಮಾಜಿ ಅಧ್ಯಕ್ಷೆ ವನಿತಾ, ಸೇವಾಪ್ರತಿನಿಧಿ ಲೈಲಾಬಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್ ಮಾಣಿ, ಗುತ್ತಿಗೆದಾರರಾದ ನಾಗರಾಜ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರು.