ಮಂಗಳೂರು: ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ಹಿಂದೂ ಶೈಲಿಯ ದೇವಸ್ಥಾನದ ಗುಡಿ ಪತ್ತೆಯಾಗಿದೆ.
ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ಗುಡಿ ಪತ್ತೆಯಾಗಿದೆ. ಗುಡಿ ಪತ್ತೆಯಾಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಿಂದೂ ಜಾಗರಣ ವೇದಿಕೆ ಮತ್ತು ಹಿಂದೂ ಪರಿಷದ್ ಪ್ರಮುಖರು, ಕಾರ್ಯಕರ್ತರು ಕೂಡಾ ಸ್ಥಳಕ್ಕೆ ಭೇಟಿ ನೀಡಿದ್ದು, ತಹಶೀಲ್ದಾರ್ ಬಂದ ನಂತರ ಸಂಘಟನೆಯ ಪ್ರಮುಖರು ಈ ಕಟ್ಟಡದ ಕಾಮಗಾರಿಯನ್ನೂ ತನಿಖೆ ನಡೆಯುವ ವರೆಗೆ ತಾತ್ಕಾಲಿಕ ತಡೆ ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ತಹಶೀಲ್ದಾರ್ ದರ್ಗಾ ಕಮಿಟಿಗೆ ಮನವರಿಕೆ ಮಾಡಿದ್ದು, ದರ್ಗಾ ಕಮಿಟಿಯವರು ಈ ನಿರ್ಣಯಕ್ಕೆ ಒಪ್ಪಿದರು.
ಈ ವೇಳೆ ಹಿಂದೂ ಸಂಘಟನೆ ಮುಖಂಡರಾದ ಪ್ರಶಾಂತ ಬಂದ್ಯೋಡು, ಶರಣ್ ಪಂಪ್ವೆಲ್, ಹರೀಶ್ ಶಕ್ತಿನಗರ, ಪ್ರಶಾಂತ ಕೆಂಪುಗುಡ್ಡೆ, ಬುಜಂಗ ಕುಲಾಲ್ ಉಪಸ್ಥಿತರಿದ್ದರು.