ಉಡುಪಿ: ನನ್ನ ಪತ್ನಿಯನ್ನು ಪಂಚಾಯತ್ ಸದಸ್ಯ ಪುಸಲಾಯಿಸಿ ಕರೆದೊಯ್ದಿದ್ದಾನೆ. ಹೀಗಂತ ಯುವಕನೊಬ್ಬ ಅಸಹಾಯಕತೆ ತೋಡಿಕೊಂಡಿದ್ದಾನೆ. ಅಲ್ಲದೇ ಮುಸ್ಲಿಂ ಸಮುದಾಯದ ಬಹುಪತ್ನಿತ್ವ ಪದ್ದತಿಯಿಂದಲೇ ಈ ರೀತಿ ನಡೆಯಬಾರದು ನಡೆಯುತ್ತೆ. ಹೀಗಾಗಿ ತಲಾಖ್ ನಿಷೇಧದಂತೆ ಬಹು ಪತ್ನಿ ಪದ್ಧತಿ ನಿಷೇಧ ಮಾಡಿ ಅಂತ ಮುಸ್ಲಿಂ ಕುಟುಂಬವೊಂದು ಪ್ರಧಾನಿ ಮೋದಿಗೆ ಮನವಿ ಮಾಡಿದೆ.
ವೃತ್ತಿಯಲ್ಲಿ ಚಾಲಕನಾಗಿರೋ ಮಹಮ್ಮದ್ ಇಲಿಯಾಸ್, ಹಲವು ವರ್ಷಗಳಿಂದ ಇಷ್ಟಪಟ್ಟ ಯುವತಿಯನ್ನು ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ. ಒಂದು ಗಂಡು ಮಗುವಿನ ಜೊತೆ ಸುಖ ಸಂಸಾರವನ್ನು ನಡೆಸುತ್ತಿದ್ದ. ಆದರೆ ಅದು ಯಾವಾಗ ಈತನ ಸಂಸಾರದ ಮೇಲೆ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ. ಮುಂದೆ ಆಗಿದ್ದು ಮಾತ್ರ ದುರಂತ.

ಪತಿಯಿದ್ರೂ ಪಂಚಾಯತ್ ಸದಸ್ಯನ ಮೇಲೆ ಮೋಹ:
ಇಲಿಯಾಸ್ನ ಪತ್ನಿ ಮತ್ತೊಮ್ಮನ ಮೇಲೆ ಮೋಹಗೊಂಡಿದ್ಲು. ಈ ಮೋಹ ಮದುವೆಯಾಗಿ 3 ಮಕ್ಕಳಿರುವ ಶಾಫಿ ಕಲಂದರ್ ಎಂಬಾತನ ಜೊತೆ ಸಂಸಾರ ಹೂಡಿದ್ಲು. ಶಾಫಿ ಕಲಂದರ್ ಪಡುಬಿದ್ರಿ ಪರಿಸರದಲ್ಲಿ ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯ. ಕೆಲವು ಅಕ್ರಮ ಚಟುವಟಿಕೆಗಳಲ್ಲಿ ಈತನ ಹೆಸರು ಈ ಹಿಂದೆ ಕೇಳಿ ಬಂದಿತ್ತು.
ಅದೊಮ್ಮೆ ಇಲಿಯಾಸ್ಗೆ ಶಾಫಿ ಕರೆ ಮಾಡಿ, ನಿನ್ನ ಪತ್ನಿಗೆ ತಲಾಖ್ ನೀಡದೆ ಇದ್ದರೆ ನಿನ್ನ ಮಗುವನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದ್ನಂತೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ನೀಡಿದ್ರೂ ಪೊಲೀಸರು ಕೂಡ ಶಾಫಿ ಪರ ನಿಂತಿದ್ದಾರೆ ಅಂತ ಇಲಿಯಾಸ್ ಹೀಗೆ ಅಳಲು ತೋಡಿಕೊಳ್ತಿದ್ದಾನೆ.

ಶಾಫಿ ಕಲಂದರ್ ಜೊತೆ ಹೋದ ಇಲಿಯಾಸ್ ಪತ್ನಿ.
ಶಾಫಿಯ ಮೊದಲ ಮಗಳಿಗೆ 18 ವರ್ಷ. ಈಗ ಆತ ಕರೆದುಕೊಂಡು ಹೋದ ಇಲಿಯಾಸ್ ಪತ್ನಿ ಜೀನತ್ಗೆ 22 ವರ್ಷ. ತನ್ನ ಮಗಳ ವಯಸ್ಸಿನ ಯುವತಿ ಜೊತೆ ಮದುವೆಗೆ ಮುಂದಾದ ಶಾಫಿ ಕಲಂದರ್ಗೆ ಕಾನೂನಿನ ಬೆಂಬಲ ಇದೆ. ಮುಸ್ಲಿಂ ಸಮುದಾಯದಲ್ಲಿ ಒಂದಕ್ಕಿಂತ ಹೆಚ್ಚು ಮದುವೆಗೆ ಅವಕಾಶ ಇದೆ. ಶಾಫಿ ನಡೆಯಿಂದ ಆತನ ಮೊದಲ ಪತ್ನಿ ಮತ್ತು ಇತ್ತ ಕಡೆ ಹೆಂಡತಿ ಕಳೆದುಕೊಂಡ ಇಲಿಯಾಸ್ ಇಬ್ಬರು ಅಸಹಾಯಕರಾಗಿದ್ದಾರೆ. ತ್ರಿವಳಿ ತಲಾಖ್ ನಿಷೇಧ ಮಾಡಿದಂತೆ ಈ ಬಹುಪತ್ನಿತ್ವ ಪದ್ಧತಿ ನಿಷೇಧ ಮಾಡಬೇಕು ಅಂತ ಇಲಿಯಾಸ್ ಅಕ್ಕ ಆಯೇಷಾ ಒತ್ತಾಯಿಸ್ತಿದ್ದಾಳೆ.
ಇದಲ್ಲದೆ, ಇಲಿಯಾಸ್ ಮತ್ತು ಆತನ ಅಕ್ಕನ ಮೇಲೆ ಈ ಜೀನತ್ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾಳೆ. ಒಟ್ಟಿನಲ್ಲಿ ಗಂಡನಿಗೆ ತಲಾಖ್ ನೀಡದೆ ಇನ್ನೊಬ್ಬನ ಜೊತೆ ಹೋಗಿರುವ ಜೀನತ್ ನಡೆ ಪೊಲೀಸರಿಗೆ ಬಗೆಹರಿಸಲಾಗದ ಕಗ್ಗಂಟಾಗಿದೆ. ಇತ್ತ ಇಲಿಯಾಸ್ ಕೂಡ ನನಗೆ ಪತ್ನಿ ಬೇಕು ಅಂತ ಹೋರಾಟ ನಡೆಸ್ತಿದ್ದಾನೆ.