ಚಾಮರಾಜನಗರ: ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಬೈಕ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಜಾಲಿ ರೈಡ್ ಮಾಡಿರೋ ಘಟನೆ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಬೈಕಿನ ಪೆಟ್ರೋಲ್ ಟ್ಯಾಂಕಿನ ಮೇಲೆ ಯುವತಿಯನ್ನು ಕೂರಿಸಿಕೊಂಡು ರೊಮ್ಯಾನ್ಸ್ ಮಾಡುತ್ತಾ ಅಜಾಗರೂಕತೆಯಿಂದ ಹೆಲ್ಮೆಟ್ ಸಹ ಧರಿಸಿದೆ ಬೈಕ್ ಸವಾರಿ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬೈಕ್ ಸಮೇತ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.

ರಸ್ತೆ ಮೇಲೆ ಬಸ್, ಲಾರಿಯಂತಹ ಯಾವುದೇ ವಾಹನ ಬಂದರೂ ಲೆಕ್ಕಿಸದೇ ಇಬ್ಬರೂ ಪ್ರೇಮಿಗಳು ಜಾಲಿಯಾಗಿ ರೈಡ್ ಮಾಡಿದ್ದಾರೆ. ಜನರನ್ನೂ ಲೆಕ್ಕಿಸದೆ ಯುವಕ ಯುವತಿಯ ಹುಚ್ಚಾಟ ಮೆರೆದಿದ್ದಾರೆ.
ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿ ತನ್ನ ಪ್ರಿಯಕರನನ್ನು ತಬ್ಬಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೈಕ್ ಚಾಮರಾಜನಗರದ ನೋಂದಣಿ ಸಂಖ್ಯೆಯನ್ನು ಹೊಂದಿದೆ.
ಯುವಕ-ಯುವತಿ ಒಂದೇ ಊರಿನವರೂ ಎಂದು ಹೇಳಲಾಗಿದೆ.ಈ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡ ಚಾಮರಾಜನಗರ ಸಂಚಾರ ಠಾಣೆ ಪೊಲೀಸರು, ಬೈಕ್ ಸವಾರನ ಪತ್ತೆಗೆ ಕ್ರಮ ಕೈಗೊಂಡಿದ್ದರು.
ಬೈಕ್ ನಂಬರ್ ಪರಿಶೀಲಿಸಿ ಅದರ ಸವಾರ ಎಚ್.ಡಿ. ಕೋಟೆಯ ತಾಲೂಕಿನ ನಿವಾಸಿ ಎಸ್. ಸಿ. ಸ್ವಾಮಿ ಎಂದು ತಿಳಿದು, ಆತನನ್ನು ಪತ್ತೆ ಹಚ್ಚಿ ಶುಕ್ರವಾರ ವಶಕ್ಕೆ ಪಡೆದಿದ್ದಾರೆ.