ದಾವಣಗೆರೆ: ಕಟ್ಟಡದ ಮೇಲಿಂದ ಬಿದ್ದು ಪಿಯು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಗರದ ಪಿಸಾಳೆ ಕಾಂಪೌಂಡ್ ನಲ್ಲಿ ಸಂಭವಿಸಿದೆ.
ಮೃತರನ್ನು ಮಿಥುನ್ ಎನ್ನಲಾಗಿದೆ.
ಮಿಥುನ್ ಖಾಸಗಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಆತ ಇಂದು ಗಣಿತ ಪರೀಕ್ಷೆ ಬರೆಯಬೇಕಾಗಿತ್ತು.
ಶುಕ್ರವಾರ ರಾತ್ರಿ ಮನೆಯ ಟೆರಸ್ ಮೇಲೆ ಓದುತ್ತಿದ್ದನು. ಮಗ ಓದುತ್ತಿರುವುದನ್ನು ನೋಡಿ ಪೋಷಕರು ಮಲಗಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಮಿಥುನ್ ಟೆರಸ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವುದು ಕಂಡು ಬಂದಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳಕ್ಕೆ ಶ್ವಾನದಳದೊಂದಿಗೆ ಆಗಮಿಸಿದ ಪೋಲೀಸರು ತನಿಖೆ ಪ್ರಾರಂಭ ಮಾಡಿದ್ದಾರೆ.