ಮಂಗಳೂರು: ನಗರದಲ್ಲಿ ವಾಸವಾಗಿದ್ದ ಫ್ರಾನ್ಸ್ ನಾಗರಿಕರೊಬ್ಬರಿಂದ ಲಕ್ಷಾಂತರ ರೂ. ಹಣ ಪಡೆದು ವಾಪಸ್ ನೀಡಲು ವಿಳಂಬ ಮಾಡಿ ಸತಾಯಿಸಿದ ಪ್ರಕರಣ ನಡೆದಿದ್ದು, ಪೊಲೀಸರ ಮಧ್ಯ ಪ್ರವೇಶದಿಂದ ಫ್ರಾನ್ಸ್ ನಾಗರಿಕರಿಗೆ ಕೊನೆಗೂ ಹಣ ದೊರೆತಿದೆ.
ಫ್ರಾನ್ಸ್‌ನ ವಿಲ್ಲೆನಗರದ ಸೋಲಾರ್ ಇನ್ ಡ್ಯೂ ಕಂಪೆನಿಯ ಉದ್ಯೋಗಿ, ಎಂಜಿನಿಯರ್ ತಿಯೊಫೆಲ್ (29) ಎಂಬವರು ಒಂದು ವರ್ಷದಿಂದ ಕುಂಟಿಕಾನ ಸಮೀಪದ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.
ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಇವರಿಗೆ ಪರಿಚಯವಾದ ಸ್ಥಳೀಯ ವ್ಯಕ್ತಿಯೊಬ್ಬರು ಹೊಟೇಲ್ ಉದ್ಯಮ ಆರಂಭಿಸುವುದಾಗಿ ಹೇಳಿ 4 ತಿಂಗಳಲ್ಲಿ ಒಟ್ಟು 7.76 ಲಕ್ಷ ರೂ. ಗಳನ್ನು ಹಂತಹಂತವಾಗಿ ಪಡೆದುಕೊಂಡಿದ್ದರು. ಆದರೆ ಅದನ್ನು ವಾಪಸು ನೀಡಲು ವಿಳಂಬ ಮಾಡಿ ಸತಾಯಿಸುತ್ತಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದರು.
ಈ ಬಗ್ಗೆ ತಿಯೊಫೆಲ್ ಡಿಸಿಪಿ ಶಂಕರ್ ಅವರನ್ನು ಸಂಪರ್ಕಿಸಿ ಅಹವಾಲು ಸಲ್ಲಿಸಿದ್ದರು. ಸದ್ಯ ಈ ವಿಷಯ ತಿಳಿದ ಹಣ ಪಡೆದಿದ್ದ ವ್ಯಕ್ತಿಯ ತಂದೆ ಸಂಪೂರ್ಣ ಹಣವನ್ನು ವಾಪಸು ನೀಡಿದ್ದಾರೆ.