ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಕೊನೆಗೂ ಬಂಧಿಸಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ದಿವ್ಯಾ ಹಾಗರಗಿಯನ್ನು ಸಿಐಡಿ ತಂಡ ಬಂಧಿಸಿದೆ.
ದಿವ್ಯಾ ಹಾಗರಗಿ ಒಡೆತನಕ್ಕೆ ಸೇರಿದ ಜ್ಞಾನ ಜ್ಯೋತಿ ಶಾಲೆಯ ಪರೀಕ್ಷೆ ಕೇಂದ್ರದಲ್ಲಿ ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಬ್ಲೂಟೂತ್ ಮೂಲಕ ಅಕ್ರಮ ಎಸಗಿದ ಹಿನ್ನೆಲೆಯಲ್ಲಿ ಕಳೆದ ಏ. 9 ರಂದು ಎಫ್ ಐಆರ್ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ದಿವ್ಯಾಳನ್ನು ಕೊನೆಗೂ ಬಂಧಿಸಲಾಗಿದೆ.
ಕಳೆದ ಎರಡುವರೆ ವಾರಗಳಿಂದ ನಾಪತ್ತೆಯಾಗಿದ್ದ ದಿವ್ಯಾ ಬಂಧನ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಸಿಐಡಿ ಡಿಜಿಪಿ ಪಿ.ಎಸ್.ಸಂಧು ಕಲಬುರಗಿಗೆ ಆಗಮಿಸಿ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಪುಣೆಯ ಹೊಟೇಲೊಂದರದಲ್ಲಿ ರಾತ್ರಿ ಊಟ ಮಾಡುವ ಸಮಯದಲ್ಲಿ ಸಿಐಡಿ ತಂಡ ದಾಳಿ ನಡೆಸಿ ಬಂಧಿಸಿದೆ.
ದಿವ್ಯಾಗೆ ಆಶ್ರಯ ನೀಡಿದ್ದ ಸೊಲ್ಲಾಪುರ ಉದ್ಯಮಿ ಸುರೇಶ ಹಾಗೂ ಜ್ಞಾನಜ್ಯೋತಿ ಶಾಲೆಯ ಮುಖ್ಯೋಧ್ಯಾಪಕ ಕಾಶೀನಾಥ್, ಮೇಲ್ವಿಚಾರಕರಾದ ಅರ್ಚನಾ, ಸುನಂದಾ ಹಾಗೂ ಅಕ್ರಮವಾಗಿ ಪರೀಕ್ಷೆ ಬರೆದ ಶಾಂತಾಬಾಯಿಯನ್ನು ಸೇರಿ ಆರು ಜನರನ್ನು ಬಂಧಿಸಲಾಗಿದೆ. ಗುರುವಾರದವರೆಗೂ 17 ಆರೋಪಿಗಳನ್ನು ಬಂಧಿಸಲಾಗಿತ್ತು ಈಗ ಆರು ಆರೋಪಿಗಳನ್ನು ಬಂಧಿಸುವುದರ ಮೂಲಕ ಆರೋಪಿಗಳ ಸಂಖ್ಯೆ 23ಕ್ಕೆ ಏರಿದಂತಾಗಿದೆ.