ಮಂಗಳೂರು : ಮಂಗಳೂರಿನಲ್ಲಿ ದೊಡ್ಡ ಕ್ರಿಮಿನಲ್ ಗ್ಯಾಂಗ್ ಕಟ್ಟಲೆಂದು ಸ್ಕೆಚ್ ಹಾಕಿಕೊಂಡು, ದ್ವಿಚಕ್ರ ವಾಹನವನ್ನು ತಡೆದು ದ್ವಿಚಕ್ರ ವಾಹನ ಸವಾರರನ್ನು ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ದ್ವಿಚಕ್ರ ವಾಹನ ಸವಾರರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ರೌಡಿ ಶೀಟರ್‌ಗಳು ಎಂದು ತಿಳಿಸಿದ್ದಾರೆ.
ಬಂಧಿತರನ್ನು ನಗರದ ಕುಲಶೇಖರದ ದೀಕ್ಷಿತ್ ಯಾನೆ ದೀಕ್ಷು ಕುಂಡಕೋರಿ ಯಾನೆ ದೀಕ್ಷಿತ್ ಪೂಜಾರಿ (32), ಸೋಮೇಶ್ವರದ ಚಂದ್ರ ಯಾನೆ ಚಂದ್ರಹಾಸ ಪೂಜಾರಿ (34), ಕೋಟೆಕಾರ್‌ನ ಪ್ರಜ್ವಲ್ ಯಾನೆ ಹೇಮಚಂದ್ರ, ಸುರತ್ಕಲ್ ಚೇಳಾರಿನ ಸಂತೋಷ್ ಪೂಜಾರಿ ಯಾನೆ ನಾಯಿ ಸಂತು (38) ಎಂದು ಗುರುತಿಸಲಾಗಿದೆ. ಇವರ ಮೇಲೆ ಬೇರೆ ಬೇರೆ ಠಾಣೆಗಳಲ್ಲಿ ರೌಡಿಶೀಟ್ ತೆರೆಯಲಾಗಿದೆ. ಇವರು ಈಗಾಗಲೇ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್ ನ ಸಹಚರರಾಗಿದ್ದು, ಇವರು ಗಾಂಜಾ ಡ್ರಗ್ಸ್ ದಂಧೆ, ಮರಳು ದಂಧೆ ಹಾಗೂ ಹಫ್ತಾ ವಸೂಲಿಯಂತಹ ವಸೂಲಿ ತಂಡದವರಾಗಿದ್ದು, ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಿಸಿ ದೊಡ್ಡ ರೀತಿಯ ರೌಡಿ ಗ್ಯಾಂಗ್ ಕಟ್ಟಿಕೊಂಡು ಎದುರಾಳಿಗಳಾದ ಪ್ರದೀಪ್ ಮೆಂಡನ್, ಮಂಕಿಸ್ಟಾಂಡ್ ವಿಜಯನ ಗ್ಯಾಂಗ್‌ನವರನ್ನು ಗುರಿಯಾಗಿಸಿ ಹತ್ಯೆ ಮಾಡುವ ಸಂಚನ್ನು ಹೂಡಿರುತ್ತಾರೆ.
ಬಂಧಿತರು ಮಾರಕಾಸ್ತ್ರಗಳನ್ನು ಹೊಂದಿರುವ ಬಗ್ಗೆ ಮತ್ತು ಇತರರನ್ನು ಸೇರಿಸಿಕೊಂಡು ಒಂದು ವ್ಯವಸ್ಥಿತವಾದ ದೊಡ್ಡ ರೌಡಿ ಗ್ಯಾಂಗನ್ನು ಕಟ್ಟುತ್ತಿರುವ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ವಿರೋಧಿ ಗ್ಯಾಂಗ್‌ನವರನ್ನು ಕೊಲೆಮಾಡಲು ಬೇಕಾದ ಮಾರಕಾಯುಧಗಳನ್ನು ಹೊಂದಿಸಲು, ವಾಹನಗಳು ಮತ್ತು ದುಡ್ಡನ್ನು ಹೊಂದಿಸಲು ಈ ತಂಡವು ತಡರಾತ್ರಿ ಸಂಚಾರ ಮಾಡುವವರನ್ನು ಮತ್ತು ಶ್ರೀಮಂತರನ್ನು ಸುಲಿಗೆ ಮಾಡಿ ಹಣ ಗಳಿಸುತ್ತಿತ್ತು, ಹೈವೆ ರಾಬ್ರಿ ಮಾಡುತ್ತಿತ್ತು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಈ ಆರೋಪಿಗಳು ಕುಲಶೇಖರ ಮತ್ತು ನೀರುಮಾರ್ಗದಲ್ಲಿ ದ್ವಿಚಕ್ರ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದರು. ಸದ್ಯ ಆರೋಪಿಗಳಿಂದ ದರೋಡೆ ಮಾಡಿದ ಎರಡು ದ್ವಿಚಕ್ರ ವಾಹನ, ಹಣ, ಮೊಬೈಲ್ ಫೋನ್ ಚಾರ್ಜರ್ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಲಾಗಿದೆ. ಈ ನಾಲ್ವರೂ ರೌಡಿ ಶೀಟರ್‌ಗಳಾಗಿದ್ದು, ದೀಕ್ಷಿತ್ ಮೇಲೆ ಈಗಾಗಲೇ 12 ಪ್ರಕರಣಗಳು, ಚಂದ್ರಹಾಸನ ವಿರುದ್ಧ 7 ಪ್ರಕರಣಗಳು, ಪ್ರಜ್ವಲ್ ವಿರುದ್ಧ 9 ಪ್ರಕರಣಗಳು ಮತ್ತು ಸಂತೋಷ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದೆ.
ಮುಖ್ಯವಾಗಿ ಮಂಗಳೂರಿನ ಕ್ರಿಮಿನಲ್ ಚಟುವಟಿಕೆಯ ಮೇಲೆ ನಿಯಂತ್ರಣ ಸಾಧಿಸುವುದು ಬಂಧಿತರ ಆರೋಪಿಗಳ ಯೋಜನೆಯಾಗಿತ್ತು. ಇವರನ್ನು ಮಂಗಳೂರು ದಕ್ಷಿಣ ಉಪವಿಭಾಗದ ಪೊಲೀಸ್ ಮತ್ತು ಸಿಸಿಬಿ ಪೊಲೀಸ್ ತಂಡ ನಾಲ್ವರನ್ನು ಬಂಧಿಸಿ ಬಹುದೊಡ್ಡ ಅನಾಹುತ ತಪ್ಪಿಸಿದ್ದಾರೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.