ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಹಿಂದೂ ಯುವಕನ್ನ ಬರ್ಬರವಾಗಿ ಕೊಚ್ಚಿ ಕೊಂದ ಘಟನೆ ಇತ್ತೀಚೆಗೆ ಹೈದ್ರಾಬಾದ್ನಲ್ಲಿ ನಡೆದಿತ್ತು. ಈ ಕ್ರೂರ ಕೃತ್ಯಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಇದೀಗ ಅಂತಹುದೇ ಮತ್ತೊಂದು ಪ್ರಕರಣ ಗುಜರಾತ್ನ ರಾಜ್ಕೋಟ್ನಲ್ಲಿ ನಡೆದಿದೆ.

ಏನಿದು ಪ್ರಕರಣ..?
ಮುಸ್ಲಿಂ ಯುವತಿಯನ್ನ ಪ್ರೀತಿ ಮಾಡಿದ್ದಕ್ಕೆ ಆಕ್ರೋಶಗೊಂಡ ಹುಡುಗಿಯ ಸಂಬಂಧಿಕರು 22 ವರ್ಷದ ಮಿಥುನ್ ಎಂಬ ಯುವಕನನ್ನ ಹೊಡೆದು ಸಾಯಿಸಿದ್ದಾರೆ.
ಯುವಕ ಮಿಥುನ್, ಸುಮೈಯಾ (Sumaiya) ಎಂಬ ಮುಸ್ಲಿಂ ಯುವತಿಯನ್ನ ಪ್ರೀತಿಸುತ್ತಿದ್ದ. ಇದು ಆಕೆಯ ಸಹೋದರನಿಗೆ ಮತ್ತು ಸಂಬಂಧಿಕರಿಗೆ ಇಷ್ಟ ಇರಲಿಲ್ಲ. ಇದಕ್ಕೆ ಕೋಪಿತಗೊಂಡ ಈ ಕುಟುಂಬ ಮಿಥುನ್ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದೆ. ಪರಿಣಾಮ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಆತ್ಮಹತ್ಯೆಗೆ ಯತ್ನಿಸಿದ ಯುವತಿ:
ಪ್ರಿಯತಮ ಯಾವಾಗ ಸಾವನ್ನಪ್ಪಿದ್ದಾನೆ ಅನ್ನೋ ವಿಚಾರ ಗೊತ್ತಾಯಿತೋ ಯುವತಿ ಕೂಡ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ನಂತರ ಆಕೆಯ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ. ವರದಿಗಳ ಪ್ರಕಾರ, ಮಿಥುನ್ ಠಾಕೂರ್, ಮೂಲತ ಬಿಹಾರದವ. ಗುಜರಾತ್ನ ಲೋಕಲ್ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಕೆಲವು ತಿಂಗಳಿನಿಂದ ಸುಮಿಯಾ ಕಡಿವರ್ ಎಂಬ ಮುಸ್ಲಿಂ ಹುಡುಗಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ.
ರಾಜ್ಕೋಟ್ನ ಜಂಗಲೇಶ್ವರದ ರಾಧ ಕೃಷ್ಣಾ ಸೊಸೈಟಿ ವಾಸ್ತವ್ಯ ಹೂಡಿದ್ದ. ಯುವತಿ ಕೂಡ ಅದೇ ಏರಿಯಾದವಳು ಆಗಿದ್ದಳು. ಮುಖ ಪರಿಚಯ ಪ್ರೀತಿಗೆ ತಿರುಗಿ ಇಬ್ಬರಿಗೊಬ್ಬರು ಇಷ್ಟಪಟ್ಟು ಪ್ರೀತಿಯಲ್ಲಿ ಬಿದ್ದಿದ್ದರು. ತುಂಬಾ ಗಾಢವಾಗಿ ಪ್ರೀತಿಸುತ್ತಿದ್ದರು. ಅದರಂತೆ ಪ್ರೀತಿಸಿ ಮದುವೆ ಆಗಲು ನಿರ್ಧರಿಸಿದ್ದರು. ಇದರ ನಡುವೆ ಮೇ 9 ರಂದು ಬೆಳಗ್ಗೆ 10 ಗಂಟೆಗೆ ಮಿಥುನ್, ಆ ಯುವತಿಗೆ ಫೋನ್ ಮಾಡಿದ್ದಾನೆ. ದುರಾದೃಷ್ಟವಶಾತ್ ಆಕೆಯ ಸಹೋದರ ಫೋನ್ ಎತ್ತಿದ್ದಾನೆ. ಮಿಥುನ್ಗೆ ಕೊಲೆ ಬೆದರಿಕೆ ಹಾಕಿದ್ದಾನೆ. ನಂತರ ಆತ ಫೋನಿನಲ್ಲಿರುವ ಲೋಕೇಷನ್ ಮಾಹಿತಿ ಪಡೆದು ಸ್ಥಳಕ್ಕೆ ಬಂದಿದ್ದಾರೆ.
ಮಿಥುನ್ ಇದ್ದ ನಿವಾಸಕ್ಕೆ ಎಂಟ್ರಿಕೊಟ್ಟ ಮೂವರು ದುಷ್ಟರು, ಮನಬಂದಂತೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಮಿಥುನ್ ಪ್ರಜ್ಞಾಹೀನ ಸ್ಥೀತಿಯಲ್ಲಿ ಬಿದ್ದಿದ್ದಾನೆ. ನಂತರ ಆತನನ್ನ ಪರಿಚಯಸ್ಥರು ರಾಜ್ಕೋಟ್ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತೀವ್ರಗಾಯಗೊಂಡಿದ್ದ ಮಿಥುನ್ಗೆ ಹ್ಯಾಮರೇಜ್ ಆಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯರು ಅಹಮದಾಬಾದ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಅದರಂತೆ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಮೇ 11 ರಂದು ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ.