ಪುತ್ತೂರು: ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಸುಷ್ಮಾ ಸದಾಶಿವ್ ಅವರು ಮಂಗಳೂರು ವಿಶ್ವವಿದ್ಯಾನಿಲಯವು 2019 – 20ನೇ ಸಾಲಿನಲ್ಲಿ ನಡೆಸಿದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ (ಎಂಸಿಜೆ) ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಪಡೆದಿದ್ದಾರೆ. ಈ ಮೂಲಕ ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ 2018-20ನೇ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಗೋಲ್ಡ್ ಮೆಡಲ್’ಗೆ ಭಾಜನರಾಗಿದ್ದಾರೆ.
ಕಾಲೇಜಿನಲ್ಲಿ ಎಂಸಿಜೆ ಆರಂಭಗೊಂಡ ಎರಡನೇ ಬ್ಯಾಚ್’ನಲ್ಲಿಯೇ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಸಿಜಿಪಿಎ(Cumulative grade point average)ಯಲ್ಲಿ 10ಕ್ಕೆ 8.7 ಅಂಕ ಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. 100ಕ್ಕೆ ಒಟ್ಟು ಶೇ.80.7ರಷ್ಟು ಅಂಕಗಳನ್ನು ಸುಷ್ಮಾ ಗಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕಡೇಶ್ವಲ್ಯ ಗ್ರಾಮದ ಅಮೈ ನಿವಾಸಿ ಸುಷ್ಮಾ, ಸದಾಶಿವ ಎಂ ಹಾಗೂ ಸವಿತಾ ಅವರ ಪುತ್ರಿ.