ಮಂಗಳೂರು/ಕಡಬ: ಸಾಧನೆಗೆ ನ್ಯೂನತೆಗಳು ಅಡ್ಡಿಯಲ್ಲ ಎಂದು ಈ ವಿದ್ಯಾರ್ಥಿಗಳು ತೋರಿಸಿ ಕೊಟ್ಟಿದ್ದಾರೆ. ಎಂಡೋಸಲ್ಪಾನ್ ಸಂತ್ರಸ್ತರಾಗಿದ್ದರೂ ಆ ನೋವನ್ನು ಮೆಟ್ಟಿ ನಿಂತು ಎಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ್ದಾರೆ.
ಕಡಬ ತಾಲೂಕಿನ ರಾಮಕುಂಜ ವಿದ್ಯಾಚೇತನ ಶಾಲೆಯ ಐವರು ವಿದ್ಯಾರ್ಥಿಗಳಾದ ವಿಜೇಶ್ (ಶೇ.59.84), ರಂಶೀದ್ (ಶೇ. 58.88), ಸುರೇಶ್ (ಶೇ.50.08), ಪದ್ಮಶೇಖರ್ (ಶೇ.42.88) ಹಾಗೂ ಮೋಹನ್ (ಶೇ. 41.92) ಅಂಕ ಗಳಿಸಿ ತೇರ್ಗಡೆ ಹೊಂದಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ತಿಳಿಸಿದ್ದಾರೆ.
ಹಾಗೆಯೇ ಮಂಗಳೂರಿನ ಕೋಟೆಕಣಿ ರೋಮನ್ ಆಂಡ್ ಕ್ಯಾಥರಿನ್ ಲೋಬೋ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳಾದ ಸಚಿನ್ (ಶೇ. 82.72), ಶ್ರೀ ಮೆನ್ಮಾ ಬಲ್ಲಾಳ್ (ಶೇ.75.84), ಹಾಗೂ ನಿತೇಶ್ (ಶೇ. 56) ಅಂಕ ಗಳಿಸಿದ್ದಾರೆ.

ಈ ಎರಡೂ ಶಾಲೆಗಳು ಮಂಗಳೂರಿನ ಸೇವಾ ಭಾರತಿ ಸಂಸ್ಥೆಯಿಂದ ನಡೆಸಲ್ಪಡುತ್ತಿದ್ದು, ಎಂಡೋ ಪೀಡಿತ ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ಬರೆದಿದ್ದರು. ಪರೀಕ್ಷೆಯನ್ನು ಎದುರಿಸಲು ಸಹಕರಿಸಿದಕ್ಕೆ ವಿದ್ಯಾರ್ಥಿಗಳು ರಾಮಕುಂಜೇಶ್ವರ ಕಾಲೇಜು ಪ್ರಾಂಶುಪಾಲ ಸತೀಶ್ ಭಟ್ ದೀಕ್ಷಿತಾ, ದೀಪಾ, ಮನೀಶಾ, ಕಾವ್ಯಶ್ರೀ, ಅನ್ವಿತಾ ಮತ್ತಿತರರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ವಿದ್ಯಾರ್ಥಿಗಳಿಗೆ ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಡಿಡಿಪಿಐ ಸುಧಾಕರ್ ಕೆ. ಹಾಗೂ ಇತರ ಅಧಿಕಾರಿಗಳು ಕಡಬದಲ್ಲಿರುವ ವಿದ್ಯಾರ್ಥಿಗಳ ಮನೆ ಸಮೀಪದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ವಿಶೇಷ ಪರೀಕ್ಷಾ ಕೇಂದ್ರವನ್ನು ತೆರೆದಿದ್ದರು.