ಐಪಿಎಲ್ನಲ್ಲಿ ಮತ್ತೆ ವಿಶಿಷ್ಠ ರೀತಿಯಲ್ಲಿ ಸೇನೆಗೆ ಗೌರವ ಸೂಚಿಸಲು ಮುಂದಾಗಿದ್ದಾರೆ ಸಿಎಸ್ಕೆ ನಾಯಕ ಧೋನಿ.14ನೇ ಆವೃತ್ತಿ ಐಪಿಎಲ್ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನೂತನ ಜೆರ್ಸಿ ಅನಾವರಣಗೊಳಿಸಿದೆ. ನೂತನ ಜೆರ್ಸಿಯ ಭುಜದ ಭಾಗದಲ್ಲಿ ಭಾರತೀಯ ಸೇನೆಯ ಸಮವಸ್ತ್ರದ ವಿನ್ಯಾಸವನ್ನ ಸೇರಿಸಲಾಗಿದೆ. ಸೈನಿಕರೇ ನಮ್ಮ ನಿಜವಾದ ಹೀರೋಗಳು ಅವರ ನಿಸ್ವಾರ್ಥ ಸೇವೆಗೆ ನಮ್ಮ ಗೌರವ ಎಂದು ಸಿಎಸ್ಕೆ ತಿಳಿಸಿದೆ. ಅಸಲಿಗೆ ಸೈನಿಕರಿಗೆ ಗೌರವ ಸಲ್ಲಿಸಲು ಮುಂದಾದ ಯೋಜನೆಯ ಹಿಂದಿರೋದು ಮಾಹಿ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ.
ಮಾಹಿಗೂ ಸೈನ್ಯಕ್ಕೂ ಇದೆ ವಿಶೇಷ ಸಂಬಂಧ : ಭಾರತೀಯ ಸೇನೆಗೂ ಸಿಎಸ್ಕೆ ನಾಯಕ ಧೋನಿಗೂ ಅವಿನಾಭಾವ ನಂಟಿದೆ. 2011ರಿಂದ ಧೋನಿ ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತೀಯ ಸೈನ್ಯ, ಸೇನೆ ಮೇಲೆ ವಿಶೇಷ ಅಭಿಮಾನ ಹೊಂದಿರುವ ಧೋನಿ ಅವಕಾಶ ಸಿಕ್ಕಾಗಲೆಲ್ಲಾ ಅಭಿಮಾನ ಮೆರೆದಿದ್ದಾರೆ. ದೇಶದ ಉನ್ನತ ಪದ್ಮಭೂಷಣ ಪ್ರಶಸ್ತಿಯನ್ನ ಮಾಹಿ ಸ್ವೀಕರಿಸಿದ್ದು ಸೇನಾ ಸಮವಸ್ತ್ರದಲ್ಲೇ. ಇಷ್ಟೆ ಅಲ್ಲ ಗೌರವ ಹುದ್ದೆ ಅಲಂಕರಿಸಿದ ಬಳಿಕ ಮಾಹಿ ಪ್ರಮುಖ ಶಿಬಿರಗಳಲ್ಲೂ ಪಾಲ್ಗೊಂಡು ಸೈನಿಕರೊಂದಿಗೆ ಹೆಚ್ಚು ಸಮಯ ಕಳೆದಿದ್ದಾರೆ. ಈ ಮೂಲಕ ಸೈನಿಕರೊಂದಿಗೆ ಬೆರೆತು ಅವರನ್ನ ಹುರಿದುಂಬಿಸುವ ಕೆಲಸದಲ್ಲಿ ಹಿಂದಿನಿಂದಲೂ ನಿರತರಾಗಿದ್ದಾರೆ. 2015ರಲ್ಲಿ ಆಗ್ರಾದಲ್ಲಿ ನಡೆದ ಪ್ಯಾರಾಚೂಟ್ ತರಬೇತಿ ಕೇಂದ್ರದಲ್ಲಿ 5 ತರಬೇತಿ ಪೂರ್ಣಗೊಳಿದ್ದ ಮಾಹಿ ಪ್ಯಾರಾಟ್ರೂಪರ್ ಆಗಿ ಹೊರಹೊಮ್ಮಿದ್ದರು. ಆಗ್ರಾ ಏರ್ಬೇಸ್ನಲ್ಲಿ ಕಠಿಣ ಪ್ಯಾರಚೂಟ್ ಜಂಪಿಂಗ್ ಮಾಡಿ ಗಮನ ಸೆಳೆದಿದ್ದರು.