ಮಂಗಳೂರು: ಮುಳಿಹಿತ್ಲುವಿನ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಅಡಮಾನ ಇರಿಸಿದ್ದ ಚಿನ್ನಾಭರಣಗಳನ್ನು ಫೈನಾನ್ಸ್ ನವರು ಬದಲಾಯಿಸಿ ವಂಚನೆ ಮಾಡಿರುವುದಾಗಿ ಆರೋಪಿಸಿ ಫಿರೋಜ್ ಖಾನ್ ಎಂಬ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ನಾಲ್ಕೈದು ತಿಂಗಳ ಹಿಂದೆ ಮುಳಿಹಿತ್ಲುವಿನ ಫೈನಾನ್ಸ್ ನಲ್ಲಿ ಮಗಳ ಹೆಸರಿನಲ್ಲಿ 249 ಗ್ರಾಂ ಮತ್ತು ನನ್ನ ಹಾಗೂ ನನ್ನ ಪತ್ನಿಯ ಹೆಸರಿನಲ್ಲಿ 140 ಗ್ರಾಂ ಚಿನ್ನಾಭರಣ ಅಡಮಾನವಿಟ್ಟು ಸುಮಾರು 13.80 ಲಕ್ಷ ರೂ. ಸಾಲ ಪಡೆದಿದ್ದೆ.
ಮಾರ್ಚ್ 22ರಂದು ಫೈನಾನ್ಸ್ ಸಿಬ್ಬಂದಿ ಮನೆಗೆ ಬಂದು ಅಡಮಾನ ಇಟ್ಟಿರುವ ಚಿನ್ನಾಭರಣಗಳು ನಕಲಿಯಾಗಿದೆ. ಸಾಲವಾಗಿ ಪಡೆದುಕೊಂಡ ಹಣವನ್ನು ಕೂಡಲೇ ಪಾವತಿಸಬೇಕು ಎಂದು ತಿಳಿಸಿದ್ದಾರೆ.ನಾನು ಅಡಮಾನವಿಡುವ ಸಂದರ್ಭದಲ್ಲಿ ಫೈನಾನ್ಸ್ ನವರು ಚಿನ್ನಾಭರಣಗಳನ್ನು ಪರೀಕ್ಷಿಸಿ ಅಸಲಿ ಚಿನ್ನವೆಂದು ಪಡೆದುಕೊಂಡಿದ್ದು ಈಗ ನಕಲಿ ಎಂದು ಹೇಳಿ ಅಸಲಿ ಚಿನ್ನಾಭರಣಗಳನ್ನು ಬದಲಾಯಿಸಿ ವಂಚಿಸಿದ್ದಾರೆ ಎಂದು ಫಿರೋಜ್ ಖಾನ್ ಅವರು ಪಾಂಡೇಶ್ವರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.