ಪುತ್ತೂರು: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ತರಬೇತಿ ಕಾರ್ಯಾಗಾರದಲ್ಲಿ ಅತಿಥಿ ಉಪನ್ಯಾಸಕಿಯೋರ್ವರು ಹಿಜಾಬ್ ಧರಿಸಿ ಉಪನ್ಯಾಸ ನೀಡಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಇದನ್ನು ಹಿಂಜಾವೇ ಖಂಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಬೆಟ್ಟಂಪಾಡಿ ಕಾಲೇಜಿನಲ್ಲಿ ಜೂ. 16 ರಿಂದ ಮೂರು ದಿನಗಳ ವಿಶೇಷ ತರಬೇತಿ ಕಾರ್ಯಾಗಾರ ನಡೆದಿತ್ತು. ಕೊನೆಯ ದಿನವಾದ ಜೂ. 18 ರಂದು ಇಲಾಖೆಯ ವತಿಯಿಂದಲೇ ಕರೆಸಿ ತರಬೇತಿ ನೀಡಲು ಬಂದಿರುವ ಅತಿಥಿ ಉಪನ್ಯಾಸಕಿ ಮುಸ್ಲಿಂ ಸಮುದಾಯದ ಮಹಿಳೆಯಾಗಿದ್ದು, ಹಿಜಾಬ್ ಧರಿಸಿಕೊಂಡೇ ತರಬೇತಿ ನಡೆಸಿಕೊಟ್ಟಿದ್ದಾರೆ ಎನ್ನಲಾಗಿದೆ.
ತರಬೇತಿ ನೀಡುತ್ತಿರುವುದನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದ್ದು ಸದ್ಯ ವಿಡಿಯೋ ಹಿಂಜಾವೇ ಕೈಗೆ ದೊರೆತಿದೆ. ಘಟನೆಯ ಬಗ್ಗೆ ಖಂಡಿಸಿರುವ ಹಿಂಜಾವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ ಮಾತ್ರವಲ್ಲದೆ ಶಿಕ್ಷಣ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.