ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಪೇಟೆ ಸವಾರಿ ಸಂದರ್ಭದಲ್ಲಿ ದೇವರು ಕಟ್ಟೆಪೂಜೆ ಸ್ವೀಕರಿಸುವ ಮಾಲಕರ ಸಭೆ ಹಾಗೂ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಮಾ.27 ರಂದು ಸಂಜೆ ದೇವಸ್ಥಾನದ ಕಾರ್ಯಲಯದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ದೇವಾಲಯದ ವಾರ್ಷಿಕ ಜಾತ್ರೆಯ ಸಂದರ್ಭ 9 ದಿನಗಳಲ್ಲಿ ಶ್ರೀ ದೇವರ ಪೇಟೆ ಸವಾರಿ ತೆರಳಿ ಭಕ್ತರಿಂದ ಶ್ರೀ ದೇವರು ಕಟ್ಟೆಪೂಜೆ ಸ್ವೀಕರಿಸುತ್ತಾರೆ. ಪುತ್ತೂರು ಸೀಮೆಯ ಒಡೆಯನ ಜಾತ್ರೆಗೆ ಸಂಬಂಧಿಸಿದಂತೆ 148 ಕಟ್ಟೆಗಳಿದ್ದು ಈ ಎಲ್ಲಾ ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆಯುತ್ತದೆ. ಕಟ್ಟೆಪೂಜೆ ಸೇವಾದಾರರು ಶ್ರೀ ದೇವರ ದೊಡ್ಡ ಆಸ್ತಿ ಎಂದರು.
ಜಾತ್ರೋತ್ಸವಕ್ಕೆ ಸಂಬಂಧಿಸಿ ಏ.3 ರಂದು ದೇವಸ್ಥಾನದ ಸಭಾಂಗಣದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ದೇವಸ್ಥಾನ ಸಭಾಂಗಣದಲ್ಲಿ ತಾತ್ಕಾಲಿಕ ರೆಡಿಮೇಡ್ ಸ್ಟಾಲ್ ಗಳಿಗೆ ಅವಕಾಶ ನೀಡಲಾಗುವುದು. ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಸೇರಿದಂತೆ ಮುನ್ಸೂಚನೆಗಳನ್ನು ಪಾಲಿಸುವಂತೆ ಭಕ್ತಾಧಿಗಳಿಗೆ ಸೂಚನೆ ನೀಡುವ ನಿಟ್ಟಿನಲ್ಲಿ ಸ್ವಯಂಸೇವಕರ ತಂಡದ ಅವಶ್ಯವಿದ್ದು ಸಹಕರಿಸಬೇಕು. ಮಾ.29 ರಂದು ಅಧಿಕಾರಿಗಳ ಸಭೆ ನಡೆಯಲಿದೆ. ದೇವಸ್ಥಾನದ ಗದ್ದೆಯಲ್ಲಿ ಭಕ್ತಿ ರಸಮಂಜರಿ ಕಾರ್ಯಕ್ರಮದ ಹೊರತಾಗಿ ಇತರ ಆರ್ಕೆಸ್ಟ್ರಾಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದರು.
ಕಟ್ಟೆಪೂಜೆ ಸೇವಾದಾರರಿಗೆ ಮಾತ್ರ ಪ್ರಸಾದ : ಜಾತ್ರೋತ್ಸವದಲ್ಲಿ ಕಟ್ಟೆಪೂಜೆಯನ್ನು ವಿಳಂಬವಾಗದಂತೆ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಪೂಜೆ ಸಂದರ್ಭದಲ್ಲಿ ಕಟ್ಟೆಗಳಲ್ಲಿ ಸೇವೆ ಮಾಡಿಸುವವರಿಗೆ ಮತ್ತು ಅವರ ಮನೆಯವರಿಗೆ ಮಾತ್ರವೇ ಪ್ರಸಾದ ವಿತರಣೆ ನಡೆಯಲಿದೆ. ಇತರರಿಗೆ ಪ್ರಸಾದ ವಿತರಣೆಗೆ ಅವಕಾಶವಿಲ್ಲ, ಕಟ್ಟೆಯ ಬಳಿ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆದೇವಳದ ಸಂಪ್ರದಾಯ, ಪದ್ಧತಿಗಳಿಗೆ ಬದ್ಧವಾಗಿರಬೇಕು. ಪೂಜೆ ಸಂದರ್ಭದಲ್ಲಿ ಕಟ್ಟೆಯ ಸುತ್ತಲೂ ಸ್ವಚ್ಛತೆ ಕಾಪಾಡಬೇಕು. ಕಟ್ಟೆ ಹೂವಿನ ಅಲಂಕಾರ ಮತ್ತು ವಿದ್ಯುತ್ ದೀಪಾಲಂಕಾರಗಳನ್ನು ದೇವರ ಉತ್ಸವ ಮೂರ್ತಿಗೆ ತಾಗದಂತೆ ಎತ್ತರದಲ್ಲಿ ಅಳವಡಿಸುವಂತೆ ತಿಳಿಸಿದರು.
ಏ.4 ಸಾಮೂಹಿಕ ಸ್ವಚ್ಛತೆ : ಜಾತ್ರೋತ್ಸವದ ಪೂರ್ವಭಾವಿಯಾಗಿ ದೇವಸ್ಥಾನದ ಪರಿಸರವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಏ.4 ರಂದು ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 7 ಗಂಟೆಗೆ ಸ್ವಚ್ಛತಾ ಪ್ರಾರಂಭವಾಗಲಿದೆ. ಸುಮಾರು 24 ತಂಡಗಳು ಸ್ವಚ್ಛತಾ ಕಾರ್ಯದಲ್ಲಿ ಈಗಾಗಲೇ ಕೈ ಜೋಡಿಸಲಿದ್ದಾರೆ. ಕಟ್ಟೆಗಳ ಮಾಲಕರು ಹಾಗೂ ಭಕ್ತಾದಿಗಳು ಈ ಕಾರ್ಯದಲ್ಲಿ ಕೈ ಜೋಡಿಸಬೇಕು. ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವವರು ಅದಕ್ಕೆ ಅವಶ್ಯಕವಾದ ಪರಿಕರಗಳನ್ನು ತಂದು ಸಹಕರಿಸುವಂತೆ ವ್ಯವಸ್ಥಾಪನ ಸಮಿತಿ ಸದಸ್ಯ ರಾಮಚಂದ್ರ ಕಾಮತ್ ಮನವಿ ಮಾಡಿದರು.
ಪ್ರಥಮ ಬಾರಿಗೆ ಸಭೆ, ಅಭಿನಂದನೆ : ಜಾತ್ರೋತ್ಸವಕ್ಕೆ ಸಂಬಂಧಿಸಿದಂತೆ ಕಟ್ಟೆಪೂಜೆ ನೆರವೇರಿಸುವ ಸೇವಾದಾರರ ಸಭೆಯನ್ನು ಪ್ರಥಮ ಬಾರಿಗೆ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಪ್ರಥಮ ಬಾರಿಗೆ ಸಭೆ ನಡೆಸಿ, ಮಾಹಿತಿ ಹಾಗೂ ಕೈಗೊಳ್ಳಬೇಕಾದ ಅವಶ್ಯಕ ಮುನ್ಸೂಚನೆಗಳನ್ನು ನೀಡಿರುವ ಆಡಳಿತ ಮಂಡಳಿಗೆ ಕಟ್ಟೆಗಳ ಮಾಲಕರು ಅಭಿನಂದನೆ ಸಲ್ಲಿಸಿದರು.
ಜಾತ್ರೋತ್ಸವದಲ್ಲಿ ವೀರಮಂಗಲ ಅವಭ್ರತ ಸವಾರಿ ಸಂದರ್ಭದಲ್ಲಿ ದೇವರ ಜೊತೆಗೆ ಬೇತಾಳ ಹಾಗೂ ಬಸವ ಕೂಡ ನರಿಮೊಗರು ತನಕ ಸಾಗಿ ಬರಬೇಕು ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದರು. ದೇವಸ್ಥಾನಕ್ಕೆ ಆದಾಯದ ದೃಷ್ಟಿಯಿಂದ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಬ್ರಹ್ಮರಥೋತ್ಸವ ಸೇವೆಗೆ ಅವಕಾಶ ನೀಡುವಂತೆ ಶಿವಪ್ರಸಾದ್ ಶೆಟ್ಟಿ ತಿಳಿಸಿದರು.ಕಟ್ಟೆಪೂಜೆಯ ಸಂದರ್ಭದಲ್ಲಿ ನಡೆದಾಡುವ ರಸ್ತೆ ಹೊರತುಪಡಿಸಿದ ಸ್ಥಳಗಳಲ್ಲಿ ಪಟಾಕಿ ಸಿಡಿಸಲು ಸೂಚನೆ ನೀಡುವಂತೆ ಸಭೆಯಲ್ಲಿ ತಿಳಿಸಿದರು. ಕಲ್ಲಾರೆ ಗುರುರಾಘವೇಂದ್ರ ಮಠದ ಯು. ಪೂವಪ್ಪ, ಶಿವಪ್ರಸಾದ್ ಶೆಟ್ಟಿ, ಜಯರಾಮ ರೈ, ವಿಜಯ ಕುಮಾರ್ ರೈ ಕೋರಂಗೆ ಮೊದಲಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
ಪೂಡಾದ ಅಧ್ಯಕ್ಷ ಬಾಮಿ ಅಶೋಕ್ ಶೆಣೈ, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಯು. ಪಿ ರಾಮಕೃಷ್ಣ, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ಮಾಸ್ಟರ್ ಪ್ಲಾನರಿಯ ಎಸ್. ಕೆ ಆನಂದ್, ಅಜಿತ್ ಕುಮಾರ್ ಜೈನ್, ಡಾ. ಅಶೋಕ್ ಪಡಿವಾಳ್, ವಿಶ್ವನಾಥ ಶೆಣೈ, ಶಾಂತರಾಮ ವಿಟ್ಲ, ಚಿಕ್ಕಪ್ಪ ನಾಯ್ಕ್, ಸೋಮಶೇಖರ ಶೆಟ್ಟಿ, ಮಾಧವ ಕೆ, ಶಿವಪ್ರಸಾದ್ ಶೆಟ್ಟಿ, ರಮಾನಂದ ನಾಯಕ್, ಸಂತೋಷ್ ಕುಮಾರ್ ಸೇರಿದಂತೆ ವಿವಿಧ ಕಟ್ಟೆಗಳ ಮಾಲಕರು ಹಾಗೂ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ವ್ಯವಸ್ಥಾಪನ ಸಮಿತಿಯ ಸದಸ್ಯರಾದ ವೇ. ಮೂ. ವಿ. ಎಸ್. ಭಟ್. ವೀಣಾ ವಿ. ಕೆ, ದೇವಸ್ಥಾನದ ವ್ಯವಸ್ಥಾಪಕ ಹರೀಶ್ ರೈ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಮದಾಸ್ ಗೌಡ ಸ್ವಾಗತಿಸಿ,ಸಮಿತಿಯ ಸದಸ್ಯ ಬಿ. ಐತಪ್ಪ ನಾಯ್ಕ್ ವಂದಿಸಿದರು.