ಮಂಗಳೂರು: ಕೊರೊನಾ ಮಹಾಮಾರಿಯ ಕಾರಣ ಉದ್ಯಮ-ವ್ಯವಹಾರ ಕ್ಷೇತ್ರದಲ್ಲಿನ ತಲ್ಲಣ ಇನ್ನು ಸರಿಯಾಗಿ ನೆಲೆ ಕಂಡಿಲ್ಲ. ಕೋಟಿ ಕೋಟಿ ರೂಪಾಯಿ ಉದ್ಯಮಕ್ಕೆ ಹಾಕಿ ಕೊರೊನಾ ದಿಂದಾಗಿ ಕೈ ಸುಟ್ಟುಕೊಂಡವರ ಸಂಖ್ಯೆಯೇನೂ ಕಡಿಮೆಯಿಲ್ಲ. ಇದೀಗ ಕೊರೊನಾ ಎರಡನೇ ಅಲೆ ಅಬ್ಬರ ಜೋರಾಗಿದೆ. ಇತ್ತ ಸಾವಿನ ಸರಮಾಲೆಯೂ ಮುಂದುವರಿದಿದೆ.
ವಿಜಯಪುರದ ಇಂಡಿಯಲ್ಲಿ ಅಮರ್ ಹೋಟೆಲ್ ನಡೆಸುತ್ತಿದ್ದ ಮಂಗಳೂರು ಮೂಲದ ಉದ್ಯಮಿ ಗಣೇಶ್ ಕೊರೊನಾ ಮಹಾಮಾರಿಯಿಂದ ಹೋಟೆಲ್ ಉದ್ಯಮದಲ್ಲಿ ಭಾರಿ ನಷ್ಟ ಅನುಭವಿಸಿದ ಕಾರಣ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಹೋಟೆಲ್ ನಡೆಸಲು 30 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲದ ಬಡ್ಡಿ ಕಟ್ಟಲು ಮೃತ ಗಣೇಶ್ ಪರದಾಡುತ್ತಿದ್ದರು. ಇದೇ ವೇಳೆ ಹೋಟೆಲ್ ಕೂಡ ಸರಿಯಾಗಿ ನಡೆಯದೆ ಚಿಂತೆಗೀಡಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇಂಡಿ ನಗರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.