ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ತಾಯಿ, ಮಗು ಮೃತಪಟ್ಟ ಘಟನೆ ನಡೆದಿದೆ.
ಎರಡು ದಿನದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಂತ ವೈದ್ಯೆ ಶೈಮಾ(39), 10 ವರ್ಷದ ಆರಾಧನಾ ಮೃತ ದುರ್ದೈವಿ. ನಗರದ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೊನ್ನೆ ಬೆಳಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ತಾಯಿ, ಮಗಳ ಮೃತದೇಹ ಪತ್ತೆಯಾಗಿದೆ. ಮಗು ಹತ್ಯೆಗೈದು ಶೈಮಾ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಶಿಪ್ಟ್ ಮಾಡಲಾಗಿದೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿರಾಜಪೇಟೆ ಮೂಲದ ಪತ್ನಿ ಸೈಮಾ ಮುತ್ತಪ್ಪ, ಕೋಲಾರ ಮೂಲದ ಪತಿ ನಾರಾಯಣ್ ಕಳೆದ 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿ ಡೆಂಟಲ್ ಡಾಕ್ಟರ್ ಆಗಿದ್ದರು. ನಾರಾಯಣ್ ಮತ್ತು ಸೈಮಾ ಇಬ್ಬರು ಒಟ್ಟಿಗೆ ಆಸ್ಪತ್ರೆಯನ್ನು ನಡೆಸುತ್ತಿದ್ದರು. ಎರಡು ದಿನಗಳ ಹಿಂದೆ ನಾರಾಯಣ್ ಮನೆಯಲ್ಲಿ ಇರಲಿಲ್ಲ. ಈ ವೇಳೆ ಸೈಮಾ ಮತ್ತು ಮಗಳು ಮನೆಯಲ್ಲಿನ ಪ್ರತ್ಯೇಕ ಕೋಣೆಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಎರಡು ದಿನಗಳ ಬಳಿಕ ನಾರಾಯಣ್ ಮನೆಗೆ ಬಂದು ನೋಡಿದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯವನ್ನು ನೋಡಿ ತಾಯಿಯೇ ಮಗಳನ್ನು ನೇಣಿಗೆ ಹಾಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇಬ್ಬರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ತನಿಖೆಯಾಗಬೇಕಿದೆ.