ಪುತ್ತೂರು: ಬೆಂಗಳೂರಿನ ನೆಲಮಂಗಲದಲ್ಲಿ ಕೋಳಿ ಸಾಗಾಟದ ಲಾರಿ ಮತ್ತು ವ್ಯಾಗನರ್ ಕಾರು ನಡುವೆ ಡಿಕ್ಕಿ ಸಂಭವಿಸಿ ಪುತ್ತೂರಿನ ನವ ವಿವಾಹತೆಯೊಬ್ಬರು ಮೃತಪಟ್ಟ ಘಟನೆ ಏ.೩ರ ಬೆಳಿಗ್ಗೆ ನಡೆದ ಬಗ್ಗೆ ವರದಿಯಾಗಿದೆ. ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ.
ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಗೋಪಿಕ್ ಎಂಬವರ ಪತ್ನಿ ಧನುಷಾ(23ವ)ರವರು ಮೃತಪಟ್ಟವರು. ದಾರಂದಕುಕ್ಕು ನಿವಾಸಿ ಸವಿತಾ ಉದಯ ಕುಮಾರ್ ನಾಯ್ಕ್ ಅವರ ಪುತ್ರ ಗೋಪಿಕ್ ಮತ್ತು ಬೆಳ್ತಂಗಡಿ ಗೇರುಕಟ್ಟೆ ಕುಂಟಿನಿ ನಿವಾಸಿ ರೂಪಾ ಮತ್ತು ಪದ್ಮನಾಭ ಶೆಟ್ಟಿಯವರ ಪುತ್ರಿ ಧನುಷಾ ಅವರ ವಿವಾಹ ಫೆ.೨೧ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆದಿತ್ತು.

ವಿವಾಹದ ಬಳಿಕ ದಾರಂದಕುಕ್ಕು ಮನೆಯಲ್ಲಿದ್ದ ನವ ದಂಪತಿ ತನ್ನ ದೊಡ್ಡಮ್ಮ ಶುಭಲಕ್ಷ್ಮೀ ಮತ್ತು ರೂಪಾ ವೇಣುಗೋಪಾಲ್ ಅವರ ಜೊತೆ ಎ.೩ರಂದು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆಂದು ನಸುಕಿನ ಜಾವ ಮಾರುತಿ ವ್ಯಾಗನರ್ ಕಾರಿನಲ್ಲಿ ಹೊರಟ್ಟಿದ್ದರು. ಕಾರು ಬೆಂಗಳೂರು ನೆಲಮಂಗಲಕ್ಕೆ ತಲುಪುತ್ತಿದ್ದಂತೆ ಕೋಳಿ ಸಾಗಾಟದ ಲಾರಿ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಗೋಪಿಕ್ ಅವರ ಪತ್ನಿ ಧನುಷಾ ಅವರು ಮೃತಪಟ್ಟಿದ್ದರು. ಉಳಿದಂತೆ ಗೋಪಿಕ್ ಮತ್ತು ಸಂಬಂಧಿಕರು ತೀವ್ರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

