ಮಂಗಳೂರು: “ದ.ಕ ಜಿಲ್ಲೆಯಲ್ಲಿ ಕೊರೊನಾ ನಿಯಮ ಉಲ್ಲಂಘನೆಗೆ ಸಂಬಂಧಪಟ್ಟಂತೆ ಜಿಲ್ಲಾಡಳಿತ ದಾಖಲಿಸಿದ ಪ್ರಕರಣಗಳ ಸಂಖ್ಯೆ 40,000 ಹಾಗೂ ದಂಡ ಸಂಗ್ರಹ 40 ಲಕ್ಷ. ರೂ. ದಾಟಿದೆ. ಮಾ.31ರ ವೇಳೆಗೆ ಮಾಸ್ಕ್ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ 40,368 ಹಾಗೂ ವಸೂಲು ಮಾಡಿರುವ ದಂಡ ಶುಲ್ಕ 42,11,630 ರೂ. ಆಗಿದೆ” ಎಂದು ಜಿಲ್ಲಾಡಳಿತದ ಅಧಿಕೃತ ಅಂಕಿ-ಅಂಶಗಳಲ್ಲಿ ತಿಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೊನಾ ನಿಯಮ ಉಲ್ಲಂಘನೆಯ ವಿರುದ್ದ ಜಿಲ್ಲಾಡಳಿತ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಈ ಕಾರಣದಿಂದ ಕಳೆದ ಕೆಲ ದಿನಗಳಿಂದ ದಾಖಲಾಗುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ ಹಾಗೂ ದಂಡ ವಸೂಲಿ ಮೊತ್ತ ಏರಿಕೆಯಾಗುತ್ತಿದೆ. ಎಷ್ಟೇ ದಂಡ ವಸೂಲಿ ವಿಧಿಸಿದರೂ ಕೂಡಾ ನಿಯಮ ಉಲ್ಲಂಘನೆಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ.
ಮಾರ್ಚ್ 22ರಂದು ಜಿಲ್ಲಾಡಳಿತದ ವತಿಯಿಂದ ಸ್ವತಃ ಜಿಲ್ಲಾಧಿಕಾರಿಯವರೇ ರಸ್ತೆಗಿಳಿದು ಮಾರ್ಕೆಟ್, ಬಸ್, ಮಾಲ್, ಅಂಗಡಿ ಮುಂಗಟ್ಟುಗಳಿಗೆ ತೆರಳಿ ನಿಯಮ ಉಲ್ಲಂಘನೆಯ ಪ್ರಕರಣಗಳ ವಿರುದ್ದ ಕಾರ್ಯಾಚರಣೆ ನಡೆಸಿದ್ದರು. ಇದೀಗ ವಿವಿಧ ಪೊಲೀಸ್ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಈ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದ್ದಾರೆ. ಆದರೆ, ಒಂದೆಡೆ ಈ ಕಾರ್ಯಾಚರಣೆ ಮುಂದುವರೆಸುತ್ತಿದ್ದರೆ, ಇನ್ನೊಂದೆಡೆ ನಿಯಮ ಉಲ್ಲಂಘನೆ ನಡೆಯುತ್ತಿದೆ. ಅಂಕಿ – ಅಂಶಗಳ ಪ್ರಕಾರ, ಮಾರ್ಚ್ 28ರಂದು 577 ಪ್ರಕರಣಗಳು, ಮಾರ್ಚ್ 29ರಂದು 579, ಮಾರ್ಚ್ 30ರಂದು 529 ಹಾಗೂ ಮಾರ್ಚ್ 31ರಂದು 373 ಪ್ರಕರಣಗಳು ದಾಖಲಾಗಿವೆ.
“ಸರಕಾರ ಹೇಳುತ್ತದೆ ಎಂದು ಸಮಾಜಕ್ಕಾಗಿ ಮಾಸ್ಕ್ ಧರಿಸುವುದು ಅಲ್ಲ. ಬದಲಾಗಿ ಅವರವರ ಕುಟುಂಬದ ರಕ್ಷಣೆಗಾಗಿ ಮಾಸ್ಕ್ ಧರಿಸಬೇಕು. ಮನೆಯಲ್ಲಿ 10 ವರ್ಷದ ಕೆಳಗಿನ ಮಕ್ಕಳಿರುತ್ತಾರೆ, 60 ವರ್ಷ ಮೇಲ್ಪಟ್ಟ ಹಿರಿಯರು ಇರುತ್ತಾರೆ. ಅವರ ಆರೋಗ್ಯದ ಹಿತದೃಷ್ಠಿಯಲ್ಲಿ ಮಾಸ್ಕ್ ಧರಿಸುವುದು ಮುಖ್ಯ” ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದ್ದಾರೆ.