ಮಂಗಳೂರು: ಮೂಡಬಿದ್ರೆ, ಬಜಪೆ, ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಣಿ ದರೋಡೆ ಪ್ರಕರಣ ಹಾಗೂ ಹೊರ ಜಿಲ್ಲೆ ಹಾಗೂ ಜಿಲ್ಲೆಯ ವಿವಿಧೆಡೆ ಮನೆಗಳ್ಳತನ, ದರೋಡೆ , ಸುಲಿಗೆ, ವಾಹನ ಸವಾರರ ಸುಲಿಗೆ ಮಾಡುತ್ತಿದ್ದ ಒಟ್ಟು 12 ಪ್ರಕರಣವನ್ನು ಪೊಲೀಸರು ಭೇದಿಸಿದ್ದು, 9 ಮಂದಿ ದರೋಡೆಕೋರರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಬ್ದುಲ್ ರವೂಫ್ (24 ), ರಾಮಮೂರ್ತಿ (23) ಅಶ್ರಫ್ ಪೆರಾಡಿ(27), ಸಂತೋಷ್(24 , ನವೀದ್(36) , ರಮಾನಂದ ಎನ್ ಶೆಟ್ಟಿ(48), ಸುಮನ್(24) , ಸಿದ್ಧಿಕ್(27) , ಅಲಿಕೋಯಾ ಎಂದು ಗುರುತಿಸಲಾಗಿದೆ.
ಸೌತಡ್ಕದಲ್ಲಿ ಮನೆ ಮಂದಿಯನ್ನು ಕಟ್ಟಿ ಹಾಕಿ ಮಾಲಕಿಗೆ ಇರಿದು ಮನೆದರೋಡೆ ಪ್ರಕರಣ, ಪುಂಜಾಲಕಟ್ಟೆಯಲ್ಲಿ ಮನೆಕಳ್ಳತನ, ಮೂಡಬಿದಿರೆ, ಬಜಪೆ, ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಣಿ ದರೋಡೆ, ಬೆಂಗಳೂರು ವಿಜಯನಗರದಲ್ಲಿ ಮನೆಕಳ್ಳತನ ಯತ್ನ , ಅರೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಮುಖ ಪ್ರಕರಣಗಳಾಗಿವೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಎರಡು ತಲವಾರು, ಏರ್ ಗನ್, ಒಂದು ಕಬ್ಬಿಣದ ರಾಡು ಒಂದು ಕಬ್ಬಿಣದ ಲಿವರ್ , ಒಂದು ಉದ್ದನೆಯ ಚಾಕು, ಮೆಣಸಿನ ಪುಡಿ ಮರದ ದೊಣ್ಣೆ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಒಂಬತ್ತು ಪ್ರಮುಖ ಆರೋಪಿಗಳಿಗೆ ಕೃತ್ಯವೆಸಗಲು ವಾಹನಗಳನ್ನು ಒದಗಿಸಿದವರು, ಹಣಕಾಸಿನ ಸಹಾಯ ಮಾಡಿದವರು, ಸಂಚು ರೂಪಿಸಲು ಭಾಗಿಯಾದವರು ತಲೆಮರೆಸಿಕೊಳ್ಳಲು ಆಶ್ರಯ ಕೊಟ್ಟವರು ಮುಂತಾದ ರೀತಿಯಲ್ಲಿ ಸುಮಾರು 30ರಿಂದ 35 ಜನ ಆರೋಪಿಗಳು ಈ ಕೃತ್ಯ ದಲ್ಲಿ ವಿವಿಧ ರೀತಿಯಲ್ಲಿ ಆರೋಪಿಗಳೊಂದಿಗೆ ಭಾಗಿಯಾಗಿದ್ದು ಇವರೆಲ್ಲರನ್ನೂ ಹೆಚ್ಚಿನ ತನಿಖೆ ನಡೆಸಿ ಬಂಧಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.