ಪುತ್ತೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯನ್ನು ತಡೆಯುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಕಾಯ್ದೆಯಂತೆ ಸರಕಾರವು ಮುಂಜಾಗೃತಾ ಕ್ರಮಗಳಿಗೆ ಸೂಚನೆ ನೀಡಿ ಆದೇಶ ಹೊರಡಿಸಿದ್ದು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯನ್ನು ಮುಂಜಾಗೃತಾ ಕ್ರಮಗಳೊಂದಿಗೆ ಸಂಪ್ರದಾಯದಂತೆ ಜಾಗರೂಕತೆ ಮತ್ತು ಯಶಸ್ವಿಯಾಗಿ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೌಕಿಕವಾಗಿ ಹೇಳಿದ್ದಾರೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಎ.೩ರಂದು ಮಧ್ಯಾಹ್ನ ಶಾಸಕ ಸಂಜೀವ ಮಠಂದೂರು ಉಪಸ್ಥಿತಿಯಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರ ಸಭೆ ನಡೆಸಿದರು. ಪುತ್ತೂರು ಜಾತ್ರೆಯ ಸಾಂಪ್ರದಾಯಿಕ ಕ್ರಮಗಳಿಗೆ ಅಡ್ಡಿಯಾಗದಂತೆ ಭಕ್ತರ ಆಶಯದಂತೆ ಯಾವುದೇ ರೀತಿಯ ಜನಸಂದಣಿಗೆ ಅವಕಾಶವಾಗದಂತೆ ಶಿಸ್ತುಬದ್ಧವಾಗಿ ಜಾತ್ರೆ ನಡೆಸಬೇಕು. ವಾಸ್ತವ ಸ್ಥಿತಿಯನ್ನು ಅರಿತುಕೊಂಡು ಭಕ್ತರು ಕೂಡಾ ಸಹಕರಿಸಬೇಕು ಎಂದು ಸಚಿವರು ಅಭಿಪ್ರಾಯಿಸಿದರು.
ಕಳೆದ ಬಾರಿ ಪುತ್ತೂರು ಜಾತ್ರೆಯ ಸಂದರ್ಭ ಲಾಕ್‌ಡೌನ್ ಆದೇಶವಿತ್ತು. ಆದ ಕಾರಣ ಜಾತ್ರೆಯನ್ನು ದೇವಳದ ಒಳಾಂಗಣದಲ್ಲಿ ಸಾಂಕೇತಿಕವಾಗಿ ಆಚರಿಸಲಾಗಿತ್ತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿಯಲ್ಲಿ ಕಟ್ಟೆ ಪೂಜೆ ಸ್ವೀಕರಿಸುವ ಪದ್ಧತಿ ಸೀಮೆಯಲ್ಲಿ ಅನಾದಿ ಕಾಲದಿಂದಲೂ ನಡೆಯುತ್ತಾ ಬರುತ್ತಿದೆ. ಇದನ್ನು ಕೊರೋನಾ ಮುನ್ನೆಚರಿಕೆಯನ್ನು ಗಮನದಲ್ಲಿರಿಸಿ ದೇವರ ಕಾರ್ಯಕ್ಕೆ ಚ್ಯುತಿಬಾರದಂತೆ ವಾರ್ಷಿಕ ಜಾತ್ರೆಯನ್ನು ನಡೆಸಲು ಸಿದ್ಧತೆ ಮಾಡಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಸಚಿವರಿಗೆ ವ್ಯವಸ್ಥಾಪನಾ ಸಮಿತಿಯ ಪರವಾಗಿ ಮನವರಿಕೆ ಮಾಡಿದರು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಯಾವುದೇ ರೀತಿಯಲ್ಲಿ ನಿಯಮಗಳನ್ನು ಉಲ್ಲಂಘಿಸದೆ ಕಟ್ಟುಪಾಡಿನಂತೆ ಜಾತ್ರೆಯನ್ನು ನಡೆಸಲಾಗುವುದು ಎಂದು ಸಚಿವರಲ್ಲಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ನಗರಸಭಾಧ್ಯಕ್ಷ ಕೆ. ಜೀವಂಧರ್ ಜೈನ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ. ಸುಧಾ ಎಸ್ ರಾವ್, ಬಿ.ಐತ್ತಪ್ಪ ನಾಯ್ಕ್, ರಾಮ್‌ದಾಸ್ ಗೌಡ, ರಾಮಚಂದ್ರ ಕಾಮತ್, ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ಪ್ರಧಾನ ಅರ್ಚಕ ವಿ.ಎಸ್ ಭಟ್, ವಸಂತ ಕೆದಿಲಾಯ, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ವಿಶ್ವನಾಥ ಕುಲಾಲ್, ಜೀವನ್ ಮತ್ತಿತರರು ಉಪಸ್ಥಿತರಿದ್ದರು.