ಪುತ್ತೂರು: ನಗರಸಭಾ ವ್ಯಾಪ್ತಿಯ ಅರ್ಯಾಪು ಗ್ರಾಮದ ಮಚ್ಚಿಮಲೆ ನಿವಾಸಿ ಸೀತಾ ಎಂಬವರಿಗೆ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರು ಮಾ .26 ರಂದು ಮಿನಿ ವಿಧಾನ ಸೌಧದ ಎದುರು ಧರಣಿ ಪ್ರತಿಭಟನೆ ನಡೆಸಿ 94c ಹಕ್ಕುಪತ್ರ ಕೊಡಿಸಿದ ಪ್ರಕರಣದ ಬಗ್ಗೆ ಪುತ್ತೂರು ಬಿಜೆಪಿ ಗುರುತರ ಆರೋಪಗಳನ್ನು ಹೊರಿಸಿದೆ.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಪ್ರತಿಭಟನೆಯ ನಾಟಕವಾಡಿ ಹಕ್ಕುಪತ್ರ ತೆಗಿಸಿಕೊಡಿಸಿದ್ದಾರೆ. ಆದರೇ ಸೀತಾರವರು ಹಕ್ಕುಪತ್ರಕ್ಕಾಗಿ ಸಲ್ಲಿಸಿದ ದಾಖಲೆಗಳು ಬೋಗಸ್ ಆಗಿತ್ತು ಎಂದು ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಆರೋಪಿಸಿದ್ದಾರೆ.
ಏ.3 ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಗೆ ಮಾಹಿತಿ ಹಕ್ಕು ಅಧಿನಿಯಮದಡಿ ಸೀತಾ ಅವರ ಮನೆಯ ಸರ್ವೆ ನಂಬ್ರ ಮತ್ತು ತೆರಿಗೆ ಪಾವತಿ ಸಂಬಂಧಿಸಿದ ದಾಖಲೆ ಕೇಳಿದಾಗ ಅಂತಹ ಯಾವುದೇ ದಾಖಲೆಗಳು ನಗರಸಭೆಯಲ್ಲಿ ಇಲ್ಲ ಎಂದು ಮಾಹಿತಿ ಲಭ್ಯವಾಗಿದೆ. ಸೀತಾ ಅವರು ಯಾರದೋ ಸಹಾಯ ಪಡೆದು ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದಾರೆ ಎಂದು ಆರೋಪಿಸಿದರು.
ಸೀತಾ ಅವರು ಖಾಸಗಿ ವ್ಯಕ್ತಿಯೊಬ್ಬರ ಕುಮ್ಕಿ ಸ್ಥಳದಲ್ಲಿ ಮನೆ ನಿರ್ಮಿಸಿದ್ದಾರೆ. ಖಾಸಗಿ ವ್ಯಕ್ತಿಗೂ ಇವರಿಗೂ ಸಿವಿಲ್ ತಕರಾರು ಇತ್ತು. ಶಾಸಕರು ಈ ಕಾನೂನಿನ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಿ ಮಾನವೀಯ ನೆಲೆಯಲ್ಲಿ ಸೀತಾ ಅವರಿಗೆ ಹಕ್ಕುಪತ್ರವನ್ನು ಕಾನೂನುಬದ್ಧವಾಗಿ ನೀಡಲು ಸಿದ್ಧತೆ ನಡೆಸಿದ್ದರು ಎಂದು ಅವರು ತಿಳಿಸಿದರು.
ಅರ್ಜಿದಾರೆ ಸೀತಾ ಅವರು ೯೪ಸಿ ನಿಯಮದಡಿ ೨೦೧೫ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆಗ ಶಕುಂತಳಾ ಟಿ. ಶೆಟ್ಟಿಯವರು ಶಾಸಕರಾಗಿದ್ದರು. ಹಕ್ಕುಪತ್ರ ನೀಡುವ ಸಮಿತಿಗೆ ಇವರೇ ಅಧ್ಯಕ್ಷರಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಸೀತಾ ಅವರಿಗೆ ಹಕ್ಕುಪತ್ರ ನೀಡ ಬಹುದಿತ್ತು ಅಲ್ಲವೇ ಎಂದು ಅವರು ಪ್ರಶ್ನಿಸಿದರು.
ಅದೇ ರೀತಿ ತಹಶೀಲ್ದಾರರು ಹಕ್ಕುಪತ್ರ ನೀಡುವ ಸಂದರ್ಭದಲ್ಲಿ ಕಡತವನ್ನು ಸರಿಯಾಗಿ ಪರಿಶೀಲಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಾಣಿಜ್ಯ ಪ್ರಕೋಷ್ಠದ ಸಂಚಾಲಕ ದಿನೇಶ್ ಕುಮಾರ್ ಜೈನ್, ನಗರಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯುವರಾಜ ಪೆರಿಯತ್ತೋಡಿ ಉಪಸ್ಥಿತರಿದ್ದರು.