ಮಂಗಳೂರು: ನಗರದ ವಿವಿಧೆಡೆ ಮಹಿಳೆಯರ ಸರ ಸುಲಿಗೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕುಲಶೇಖರ ಸಮೀಪದ ಶಕ್ತಿನಗರ ನಿವಾಸಿ ಜಗದೀಶ್ ಶೆಟ್ಟಿ (39), ಉರ್ವಸ್ಟೋರ್ ನಿವಾಸಿ ಸುಜಿತ್ ಶೆಟ್ಟಿ (40), ಪುತ್ತೂರು ಅಂಕತಡ್ಕ ಮೂಲದ, ಪ್ರಸ್ತುತ ಕೊಂಚಾಡಿ ಪದವಿನಂಗಡಿ ನಿವಾಸಿ ಸುರೇಶ್ ರೈ (39) ಎಂದು ಗುರುತಿಸಲಾಗಿದೆ.

ಆಗಸ್ಟ್‌ನಲ್ಲಿ ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಸರ ಸುಲಿಗೆ ಮತ್ತು ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 1 ಸರ ಸುಲಿಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ನಗರದ ಕಾರ್ ಸ್ಟ್ರೀಟ್ ಬಳಿ ಚಿನ್ನದ ಸರವನ್ನು ಮಾರಾಟ ಮಾಡಲು ಬಂದಾಗ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಜಗದೀಶ್ ರಿಕ್ಷಾ ಮತ್ತು ಸುರೇಶ್ ರೈ ಟೆಂಪೋ ಚಾಲಕ ಹಾಗೂ ಸುಜಿತ್ ಶೆಟ್ಟಿ ಪೈನಾನ್ಸ್ ವ್ಯವಹಾರ ಮಾಡುತ್ತಿದ್ದ ಎನ್ನಲಾಗಿದೆ. ಸುಜಿತ್ ಶೆಟ್ಟಿ ಮಂಗಳೂರಿನಲ್ಲಿ 2002ರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ.
ಆರೋಪಿಗಳಿಂದ ಸುಲಿಗೆ ಮಾಡಿದ್ದ 90 ಗ್ರಾಂ ತೂಕದ ಚಿನ್ನಾಭರಣ, 2 ಸ್ಕೂಟರ್ ಮತ್ತು 3 ಮೊಬೈಲ್ ಫೋನ್ ಸಹಿತ ಒಟ್ಟು 5 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.