ಬಂಟ್ವಾಳ : ಸಾಮಾನ್ಯವಾಗಿ ರಕ್ತದಾನಿಗಳು ರಕ್ತದಾನ ಮಾಡಿದ ಬಳಿಕ ಹಣ್ಣಿನ ರಸವನ್ನು (ಜ್ಯೂಸ್) ನೀಡುತ್ತಾರೆ. ಆದರೆ ಏಪ್ರಿಲ್ 4 ರ ಭಾನುವಾರ ವಿಟ್ಲದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ, ದಾನಿಗಳಿಗೆ ಜ್ಯೂಸ್ ಬದಲಾಗಿ ಪೆಟ್ರೋಲ್ ನೀಡಲಾಗಿದೆ. ಭಾನುವಾರ ಒಕ್ಕೆತ್ತೂರು ಸರ್ಕಾರಿ ಶಾಲೆಯಲ್ಲಿ ಬಂಟ್ವಾಳದ ವಿಟ್ಲ ವಲಯದ ಬೆಳಕು ಮತ್ತು ಧ್ವನಿ ವಿತರಕರ ಒಕ್ಕೂಟ, ಮಂಗಳಪದವು ಐಡಿಯಲ್ ಫ್ಯೂಲ್ಸ್, ವಿಟ್ಲ ಲಯನ್ಸ್ ಕ್ಲಬ್ ಮತ್ತು ಮಂಗಳೂರು ಕೆಎಂಸಿ ಆಸ್ಪತ್ರೆಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ರಕ್ತದಾನ ಕಾರ್ಯಕ್ರಮದಲ್ಲಿ ಮೊದಲ 50 ರಕ್ತದಾನಿಗಳಿಗೆ, ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಉಚಿತವಾಗಿ ನೀಡಲಾಯಿತು. ಸ್ಥಳದಲ್ಲೇ ಕೂಪನ್‌ಗಳನ್ನು ಸಂಗ್ರಹಿಸಿದ ರಕ್ತದಾನಿಗಳು ತಮ್ಮ ವಾಹನಗಳಿಗೆ ಪೆಟ್ರೋಲ್ ಅಥವಾ ಡಿಸೇಲ್ ಹಾಕಿಸಿಕೊಳ್ಳಲು ಐಡಿಯಲ್ ಪೆಟ್ರೋಲ್ ಬಂಕ್‌ಗೆ ಹೋದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಘಟಕರು, ”ಹೆಚ್ಚಿನ ರಕ್ತದಾನಿಗಳನ್ನು ಆಕರ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
”ಕೊರೊನಾದ ಈ ಅವಧಿಯಲ್ಲಿ ಆಸ್ಪತ್ರೆಗಳು ರಕ್ತದ ಕೊರತೆಯನ್ನು ಎದುರಿಸುತ್ತಿವೆ. ಪೂರೈಕೆಯು ಬೇಡಿಕೆಗಿಂತ ಕಡಿಮೆಯಾಗಿದೆ” ಎಂದು ಲೈಟ್ ಅಂಡ್ ಸೌಂಡ್ ಡೀಲರ್ಸ್ ಯೂನಿಯನ್ ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ ಹೇಳುತ್ತಾರೆ. ‘ಕೆಲವರು ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಹೆಚ್ಚಿನ ಜನರು ರಕ್ತದಾನ ಮಾಡಲು ಪ್ರೋತ್ಸಾಹಿಸಲು ಮೊದಲ 50 ದಾನಿಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ನೀಡಲಾಗಿದೆ” ಎಂದು ಕೂಡಾ ಅವರು ಹೇಳಿದ್ದಾರೆ.