ಪುತ್ತೂರು: ಅತ್ಯುತ್ತಮ ಶಿಕ್ಷಕಿ ಎಂದು ಜಿಲ್ಲಾ ಪ್ರಶಸ್ತಿ ಪಡೆದಿರುವ ಅರಿಯಡ್ಕ ಗ್ರಾಮದ ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ತೆರೇಜ್ ಎಂ ಸಿಕ್ವೆರಾರವರನ್ನು ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಹಕಾರಿ ಸಂಘದ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.
ಸಹಕಾರಿ ಸಂಘದ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಯವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯ ಸಮಾರಂಭದಲ್ಲಿ ಶಿಕ್ಷಕಿಯನ್ನು ಸನ್ಮಾನಿಸಿದ ಮಹಮ್ಮದ್ ಅಲಿ ಯವರು, ತೆರೇಜ್ ಎಂ ಸಿಕ್ವೆರಾ ರವರು ನಮ್ಮ ಸಹಕಾರಿ ಸಂಘದ ಸದಸ್ಯರಾಗಿದ್ದು, ನಾನು ಸ್ಥಾಪನೆ ಮಾಡಿದ ಸಂಜಯನಗರ ಶಾಲೆಯಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಈ ಸಂದರ್ಭದಲ್ಲಿ ಶಾಲೆಯನ್ನು ಸರ್ವ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಶ್ರಮಿಸಿರುತ್ತಾರೆ ಸಂಜಯ ನಗರ ಶಾಲೆಯು ಕ್ಲಸ್ಟರ್ ಮಟ್ಟದಲ್ಲಿ, ಬ್ಲಾಕ್ ಮಟ್ಟದಲ್ಲಿ , ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆಯೆಂದು ಪ್ರಶಸ್ತಿ ಪಡೆಯುವುದರೊಂದಿಗೆ ಜಿಲ್ಲಾ ಹಸಿರು ಶಾಲಾ ಪ್ರಶಸ್ತಿ, ರಾಜ್ಯ ಮಟ್ಟದ ಉತ್ತಮ ನಲಿ -ಕಲಿಘಟಕ ಪ್ರಶಸ್ತಿ ಪಡೆಯಲು ಮೂಲ ಕಾರಣಕರ್ತರಾಗಿರುತ್ತಾರೆ. ವಿದ್ಯಾರ್ಥಿಗಳ ಪೋಷಕರಿಂದ, ಊರದಾನಿಗಳಿಂದ, ಹಳೆ ವಿದ್ಯಾರ್ಥಿಗಳಿಂದ, ಸಂಘ ಸಂಸ್ಥೆಗಳಿಂದ, ಹಾಗೂ ತನ್ನ ಕುಟುಂಬ ಸದಸ್ಯರಿಂದ ದೇಣಿಗೆ ಸಂಗ್ರಹಿಸಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸಿರುತ್ತಾರೆ,ಬಳಿಕ ಭಡ್ತಿ ಹೊಂದಿ ಪಾಪೆಮಜಲು ಶಾಲೆಯ ಮುಖ್ಯ ಗುರುಗಳಾಗಿ ಇದೀಗ ಸೇವೆ ಸಲ್ಲಿಸುತ್ತಿದ್ದಾರೆ.
ತೆರೇಜ್ ಎಂ ಸಿಕ್ವೆರಾ ರವರು ಓರ್ವ ಪರಿಸರ ಪ್ರೇಮಿಯಾಗಿದ್ದು, ವಿದ್ಯಾರ್ಥಿಗಳು ಹಸಿರು ಪರಿಸರದಲ್ಲಿ ಕಲಿಯಬೇಕೆಂಬ ಸದುದ್ದೇಶದಿಂದ ಪಾಪೆಮಜಲು ಶಾಲೆಯಲ್ಲಿ ತೆಂಗಿನ ತೋಟ ರಚನೆ, ನರೇಗಾ ಪೌಷ್ಟಿಕ ತೋಟ ರಚನೆ, ಚಿನ್ನರ ಪಾರ್ಕ್ ರಚನೆ ಮಾಡಿರುತ್ತಾರೆ. ಮೂಲ ಸೌಲಭ್ಯಗಳೊಂದಿಗೆ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕೆಂಬ ದ್ಯೇಯ ಹೊಂದಿರುವ ತೆರೇಜ್ ಎಂ ಸಿಕ್ವೆರಾ ರವರು ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಎಂದು ಪ್ರಶಸ್ತಿಗೆ ಭಾಜನರಾಗಿರುವುದು ನಮಗೆಲ್ಲರಿಗೂ ಸಂತಸ ತಂದಿದೆ. ಇವರ ಮುಂದಿನ ಜೀವನ ಸುಖಕರವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸುದ್ದಿ ಸಮೂಹ ಸಂಸ್ಥೆಯ ಮಾಲಕ ಡಾ. ಯು ಪಿ ಶಿವಾನಂದ, ಸಹಕಾರಿ ಸಂಘದ ಉಪಾಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಜಯಂತಿ ಬಾಸ್ಕರ್, ನಿರ್ದೇಶಕರುಗಳಾದ ಚಂದ್ರಕಲಾ, ಮೀನಾಕ್ಷಿ ಗೌಡ, ಸುರೇಂದ್ರ ರೈ ಬಳ್ಳಮಜಲು, ಗಣೇಶ್ ರೈ ಮೂಲೆ ಆರ್ಯಾಪು, ಇಸ್ಮಾಯಿಲ್ ಮಲಾರ್, ಗಣೇಶ್ ರೈ ಬಳ್ಳ ಮಜಲು, ಶೀನಪ್ಪ ಮರಿಕೆ, ಸಂಶುದ್ದಿನ್ ನೀರ್ಕಜೆ, ತಿಮ್ಮಪ್ಪ ನಾಯ್ಕ್ ಜಂಗಮುಗೇರು, ಶಾಖಾ ಮ್ಯಾನೇಜರ್ ಶುಭಾಶಿನಿ, ಕೇಂದ್ರ ಕಚೇರಿಯ ವ್ಯವಸ್ಥಾಪಕ ಅಜಿತ್ ರೈ ಮೊದಲಾದವರು ಉಪಸ್ಥಿತರಿದ್ದರು. ಕಚೇರಿಯ ಅಕೌಂಟೆಂಟ್ ಉಮೇಶ್ ಸಂಪ್ಯ ಸನ್ಮಾನ ಪತ್ರ ವಾಚಿಸಿದರು.