ಜ್ಞಾನವಾಪಿ ಮಸೀದಿ ಪ್ರಕರಣದ ಕುರಿತು ಮುಸ್ಲಿಂ ಅರ್ಜಿದಾರರ ಆಕ್ಷೇಪಣೆಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಐವರು ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯವೆಂದು ಉತ್ತರ ಪ್ರದೇಶದ ವಾರಾಣಸಿ ಜಿಲ್ಲಾ ಕೋರ್ಟ್ ಆದೇಶ ನೀಡಿದೆ.
ನ್ಯಾಯಾಲಯವು ಮುಸ್ಲಿಂ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿತು ಮತ್ತು ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಬಹುದು ಎಂದು ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಸೆ.22 ರಂದು ನಡೆಯಲಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.
ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ಶೃಂಗಾರ ಗೌರಿ ಮತ್ತು ಇತರ ದೇವತೆಗಳ ಆರಾಧನೆಯ ಹಕ್ಕುಗಳನ್ನು ಕೋರಿ ಮಹಿಳಾ ಫಿರ್ಯಾದಿಗಳ ಪ್ರಕರಣ ವಿಚಾರಣೆಗೆ ಯೋಗ್ಯ ಎಂದು ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ ಆದೇಶಿಸಿದ್ದಾರೆ.
ರಾಖಿಸಿಂಗ್ ಸೇರಿ ಐವರು ಮಹಿಳೆಯರು ಮಸೀದಿ ಒಳಗಡೆ ಇರುವ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡುವುಂತೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಕೋಮು ಸೂಕ್ಷ್ಮ ಪ್ರಕರಣದ ಆದೇಶವನ್ನು ಸೆಪ್ಟೆಂಬರ್ 12ಕ್ಕೆ ಕಾಯ್ದಿರಿಸಿದ್ದರು.
ಇಂದು ನ್ಯಾಯಾಲಯವು ಮಸೀದಿ ಸಮಿತಿ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಪೂಜಿಸುವ ಹಕ್ಕು ಕೋರಿ 5 ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯ ಎಂದು ತೀರ್ಪು ಪ್ರಕಟಿಸಿದೆ.
ಅರ್ಜಿ ವಿಚಾರಣೆಗೆ ಯೋಗ್ಯವಾಗಿದೆ ಎಂಬ ಆದೇಶ ಪ್ರಕಟವಾದ ಹಿನ್ನೆಲೆಯಲ್ಲಿ ಕೋರ್ಟ್ ಪೂಜೆಗೆ ಅವಕಾಶ ನೀಡಬೇಕಾ? ಬೇಡವೋ ಎಂಬ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ. ಮುಂದಿನ ಅರ್ಜಿಯ ವಿಚಾರಣೆ ಸೆ.22 ರಂದು ನಡೆಯಲಿದೆ.
ಈ ಐದು ಮಂದಿ ಮಹಿಳೆಯರು ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು ಇದು ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ಮಸೀದಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಗಂಭೀರವಾಗಿರುವ ಹಿನ್ನಲೆ ಸುಪ್ರೀಂಕೋರ್ಟ್ ಜಿಲ್ಲಾ ನ್ಯಾಯಾಲಯಕ್ಕೆ ವಿಚಾರಣೆ ನಡೆಸಲು ಸೂಚಿಸಿತ್ತು.
ಈ ಹಿಂದೆ ಜ್ಞಾನವ್ಯಾಪಿ ಮಸೀದಿಯಲ್ಲಿ ಉತ್ಖನನ ನಡೆಸಲು ಕೆಳ ಹಂತದ ನ್ಯಾಯಾಲಯ ಅನುಮತಿ ನೀಡಿತ್ತು. ಪರಿಶೀಲನೆ ವೇಳೆ ಮಸೀದಿಯ ಆವರಣದಲ್ಲಿದ್ದ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ ಹಾಗೂ ಮಂಗಳ ಗೌರಿಯ ದೇವಸ್ಥಾನ ಇದೆ ಎಂದು ಅಧಿಕಾರಿಗಳು ಕೋರ್ಟ್‍ಗೆ ವರದಿ ನೀಡಿದ್ದರು. ಈ ವರದಿಯ ಬೆನ್ನಲ್ಲೇ ದೊಡ್ಡ ಪ್ರಮಾಣ ಸಂಚಲನ ಸೃಷ್ಟಿಯಾಗಿತ್ತು. ಮಸೀದಿಯ ಜಾಗದಲ್ಲಿ ಮಂದಿರ ಇದೆ ಎಂದು ವಾದಿಸಿದ್ದರು.