ಕ್ಯಾನ್ಸರ್ ರೋಗ ಚಿಕಿತ್ಸೆಯಿಂದ ತಲೆ ಕೂದಲನ್ನು ಕಳೆದುಕೊಂಡ, ಆರ್ಥಿಕ ಸಂಕಷ್ಟದಲ್ಲಿರುವ ರೋಗಿಗಳಿಗೆ ಆಶಾಕಿರಣವಾಗಿ ವಿಗ್‌ಗಳನ್ನು ತಯಾರಿಸಿ ಉಚಿತವಾಗಿ ನೀಡಿ, ಅವರಲ್ಲಿ ಮಂದಹಾಸ ಹಾಗೂ ಮನೋಧೈರ್ಯ ಮೂಡಿಸುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿರುವ ಸಾಮಾಜಿಕ ಕಳಕಳಿಯ ಸಂಸ್ಥೆ ಸೀಡ್ಸ್ ಆಫ್ ಹೋಪ್.
ಮೂಲತಃ ಪುತ್ತೂರಿನ ಪ್ರಸಕ್ತ ಮಂಗಳೂರಿನ ಶಕ್ತಿ ಪಿ.ಯು. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಆದ್ಯ ಸುಲೋಚನಾ ಇವರ ಮುಂದಾಳತ್ವದಲ್ಲಿ 9 ಮಂದಿ ವಿದ್ಯಾರ್ಥಿಗಳಿಂದ ಪುತ್ತೂರಿನಲ್ಲಿ 2020ರಲ್ಲಿ ಆರಂಭಗೊಂಡು, ಮುನ್ನಡೆಯುತ್ತಿರುವ ಸೀಡ್ಸ್ ಆಫ್ ಹೋಪ್ ಸಂಸ್ಥೆಯಲ್ಲಿ 14 ಮಂದಿ ಸದಸ್ಯರಿದ್ದಾರೆ.
ಸೀಡ್ಸ್ ಆಫ್ ಹೋಪ್ ಸಂಸ್ಥೆಯ ನೇತೃತ್ವದಲ್ಲಿ ಮುಳಿಯ ಫೌಂಡೇಶನ್‌ನ ಪ್ರಾಯೋಜಕತ್ವದಲ್ಲಿ, ಮಂಗಳೂರು ನಗರದ ಶಕ್ತಿ ಪಿ.ಯು. ಕಾಲೇಜಿನ ಸಹಯೋಗದಲ್ಲಿ, ಜೆ.ಸಿ.ಐ. ರೆಡ್‌ಕ್ರಾಸ್ ಸೊಸೈಟಿ ಮಂಗಳೂರು, ದ ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳ ಸಂಘ ಮತ್ತು ಲೇಡಿಸ್ ಬ್ಯೂಟಿಪಾರ್ಲರ್ ಅಸೋಸಿಯೆಶನ್ ಮಂಗಳೂರು ಇವರೆಲ್ಲರ ಸಹಭಾಗಿತ್ವದಲ್ಲಿ, ಶಕ್ತಿ ಪಿ.ಯು ಕಾಲೇಜಿನ ರೇಷ್ಮಾ ಮೆಮೋರಿಯಲ್ ಅಡಿಟೋರಿಯಮ್‌ನಲ್ಲಿ ಸೆ.11ರಂದು ಕೇಶದಾನ ಶಿಬಿರ ಆಯೋಜಿಸಲಾಗಿತ್ತು.
ಕ್ಯಾನ್ಸರ್‌ನೊಂದಿಗೆ ಹೋರಾಡಿ, ಗುಣಮುಖರಾಗಿರುವ, ಹಿಪ್ – ಹಿಪ್ – ಹುರ್ರೇ ಕಿಡ್ಸ್ ಸಂಸ್ಥೆಯ ಸ್ಥಾಪಕರಾದ ವಂದನಾ ಕಾಮತ್ ರವರು ದೀಪೋಜ್ವಲನೆಯ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಪ್ರಸಿದ್ಧ ಆಂಕಾಲಜಿಸ್ಟ್ , ಫಾದರ್‌ಮುಲ್ಲರ್ ವೈದ್ಯಕೀಯ ಕಾಲೇಜಿನ ಸರ್ಜಿಕಲ್ ಆಂಕಾಲಜಿಸ್ಟ್ ವಿಭಾಗದ ಮುಖ್ಯಸ್ಥರಾದ ಡಾ. ರೋಹನ್ ಚಂದ್ರ ಗಟ್ಟಿ ಮುಖ್ಯ ಅಭ್ಯಾಗತರಾಗಿದ್ದರು. ಶಕ್ತಿ ಪಿಯು ಕಾಲೇಜಿನ ಮುಖ್ಯ ಸಲಹೆಗಾರ ರಮೇಶ್ ಕೆ ಅಧ್ಯಕ್ಷತೆ ವಹಿಸಿದ್ದರು. ಮುಳಿಯ ಫೌಂಡೇಶನ್‌ನ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ, ಜೇಸಿ ಹೆಚ್‌ಜಿಎಫ್ ಸುಮನಾ ಪೊಳಲಿ (ಅಧ್ಯಕ್ಷರು ಮಂಗಳೂರು ಸ್ಫೂರ್ತಿ), ಬಬಿತ ಯು ಶೆಟ್ಟಿ (ಅಧ್ಯಕ್ಷರು ಲೇಡಿಸ್ ಬ್ಯೂಟಿ ಅಸೋಸಿಯೇಶನ್, ಮಂಗಳೂರು) ಮತ್ತು ಶೀತಲ್ ಕರ್ಕೆರಾ (ಸಂಪಾದಕರು ಇನ್ನರ್ ವೀಲ್ ಮಂಗಳೂರು ದಕ್ಷಿಣ) ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಈ ಸಾಮಾಜಿಕ ಕಳಕಳಿಯನ್ನು ಹಾಗೂ ಕಾರ್ಯವನ್ನು ಗಣ್ಯರೆಲ್ಲರು ಶ್ಲಾಘಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕೇಶದಾನ ಶಿಬಿರ ನಡೆಯಿತು. ಮಂಗಳೂರಿನ ಆಸುಪಾಸಿನ 72 ಮಂದಿ ದಾನಿಗಳು ತಮ್ಮ ಕೇಶದಾನವನ್ನು ಮಾಡಿದರು. ಲೇಡಿಸ್ ಬ್ಯೂಟಿ ಅಸೋಸಿಯೆಶನ್‌ನ ಸದಸ್ಯರು ದಾನಿಗಳ ಕೇಶವನ್ನು ಅಚ್ಚುಕಟ್ಟಾಗಿ ಸಂಗ್ರಹಿಸಿದರು. ಆದ್ಯ ಸುಲೋಚನ ಮುಳಿಯ ಸ್ವಾಗತಿಸಿ, ಕುಮುದಾ ವಂದಿಸಿದರು. ಹಿಮಾನಿ ಕಾವೇರಮ್ಮ ನಿರ್ವಹಿಸಿದರು. ಸೀಡ್ಸ್ ಆಫ್ ಹೋಪ್‌ನ ಮುಂದಾಳು ಆದ್ಯ ಸುಲೋಚನ ಮುಳಿಯ, ಸದಸ್ಯರಾದ ಕನ್ಯಾ ಶೆಟ್ಟಿ, ಶ್ರೀಲತಾ ಕಾಮತ್, ಹಿಮಾನಿ ಕಾವೇರಮ್ಮ, ಕುಮುದ, ಪ್ರದ್ಯುಮ್ನ ಡಿ ರಾವ್, ಸುಜ್ಞಾನ ಕೃಷ್ಣ, ದರ್ಶಿನಿ, ಶ್ರಿಯಾಂಕ, ರೋಚನ್, ಚಿರತೇಜ್, ಶ್ರುಷ್ಟಿ, ವಿಷ್ಣು ತೇಜಸ್, ತನ್ಮಯ್, ಶರಣ್, ಮಾಯಾಂಕ್, ಗ್ಲೋರಿ, ಅಮೋಫ್ ಈ ಎಲ್ಲಾ ವಿದ್ಯಾರ್ಥಿಗಳು ಈ ಶಿಬಿರವನ್ನು ಆಯೋಜಿಸಿದ್ದರು.
ಕನಿಷ್ಟ 15 ಇಂಚು ಉದ್ದದ, ಆರೋಗ್ಯಕರ ಕೇಶರಾಶಿಯನ್ನು ಹೊಂದಿದವರು ಸೀಡ್ಸ್ ಆಫ್ ಹೋಪ್ ಸಂಸ್ಥೆಗೆ ತಮ್ಮ ಕೇಶವನ್ನು ದಾನ ಮಾಡಬಹುದು. ಬಣ್ಣ ಮಾಡಿದ ಕೇಶವನ್ನು ಸಹ ದಾನ ಮಾಡಬಹುದು. ಸ್ವತಃ ಅಥವಾ ಬ್ಯೂಟಿ ಪಾರ್ಲರ್ ನವರ ಸಹಾಯದಿಂದ ಕತ್ತರಿಸಲ್ಪಟ್ಟ ಕೇಶವನ್ನು ದಾನ ಮಾಡಬಹುದಾಗಿದೆ. ಒಂದು ವಿಗ್ ತಯಾರಿಸಲು 8 ರಿಂದ 12 ಮಂದಿಯ ಕೇಶ ಹಾಗೂ ವಿಗ್ ತಯಾರಿಕೆಗೆ ರೂ 8000/- ದಿಂದ ರೂ 10,000/- ವೆಚ್ಚ ಅಂದಾಜಿಸಲಾಗಿದೆ. ದಾನಿಗಳು ಕೇಶ ಹಾಗೂ ಧನ ದೇಣಿಗೆಯನ್ನು ನೀಡಬಹುದು. ಸೀಡ್ಸ್ ಆಫ್ ಹೋಪ್ ಈಗಾಗಲೇ ಕೆಲವು ಶಿಬಿರಗಳನ್ನು ಆಯೋಜಿಸಿ ಸುಮಾರು 300 ಮಂದಿಯಿಂದ ಸ್ವಚ್ಛ, ಆರೋಗ್ಯಕರ ಕೇಶ ಪಡೆದಿದ್ದು, 15 ವಿಗ್ ತಯಾರಿಸಿ ಆರ್ಥಿಕ ಸಂಕಷ್ಟದಲ್ಲಿರುವ ಕ್ಯಾನ್ಸರ್ ಪೀಡಿತ ಮಹಿಳೆಯರಿಗೆ ಉಚಿತವಾಗಿ ನೀಡಿ ಅವರ ಮುಖದಲ್ಲಿ ನಗು ತರಿಸಿ ಮನೋಧೈರ್ಯವನ್ನು ಹೆಚ್ಚಿಸಿದೆ.
ಕ್ಯಾನ್ಸರ್‌ನ ಬೇಗೆಯಿಂದ ಬಳಲಿ, ಚಿಕಿತ್ಸೆಯಿಂದ ತಲೆ ಕೂದಲು ಕಳೆದುಕೊಂಡ ವ್ಯಕ್ತಿಗಳಿಗೆ, ಮುಂದಿನ ಬಾಳಲ್ಲಿ ಭರವಸೆಯ ನಗು, ಮನಸ್ಸಿನಲ್ಲಿ ಧೈರ್ಯವನ್ನು ತುಂಬುವಂತಹ ಈ ಸದುದ್ದೇಶದ ಕಾರ್ಯದಲ್ಲಿ ಆಸಕ್ತರು ಕೈ ಜೋಡಿಸಿಕೊಳ್ಳಬೇಕೆಂದು ಈ ಉತ್ಸಾಹಿ ವಿದ್ಯಾರ್ಥಿಗಳ ಕೋರಿಕೆಯಾಗಿದೆ.