ಪುತ್ತೂರು: ಕೇಂದ್ರ ಸರಕಾರ ಜಾರಿ ಮಾಡಿರುವ ನೂತನ ಕೃಷಿ ಕಾಯಿದೆ ಅನುಷ್ಠಾನದಿಂದ ಯಾವುದೇ ಕಾರಣಕ್ಕೂ ರೈತ ಸಮುದಾಯಕ್ಕೆ ಅನ್ಯಾಯವಾಗಿಲ್ಲ. ಎಪಿಎಂಸಿಯೂ ದುರ್ಬಲಗೊಂಡಿಲ್ಲ. ಮಧ್ಯವರ್ತಿಗಳ ಹಿಡಿತದಿಂದ ರೈತರನ್ನು ತಪ್ಪಿಸಿ ರೈತರನ್ನೇ ನಿಜವಾದ ಮಾಲೀಕರನ್ನಾಗಿ ಮಾಡಲಾಗಿದೆ ಎಂದು ಸಂಸದ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಪ್ರಾಂಗಣದಲ್ಲಿ ಎ.೫ರಂದು ನಡೆದ ನೂತನ ಗೋದಾಮು ಉದ್ಘಾಟನೆ ಮತ್ತು ಸೋಲಾರ್ ಯೋಜನೆ ಅನುಷ್ಠಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೇಂದ್ರದಲ್ಲಿ ಮೋದಿ ಸರಕಾರ ಬಂದ ಮೇಲೆ ಅಭಿವೃದ್ಧಿಯ ಶಕೆ ಆರಂಭಗೊಂಡಿದೆ. ಹಿಂದೆ ಮಧ್ಯವರ್ತಿಗಳು ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡುತ್ತಿದ್ದರೆ, ಹೊಸ ಕಾಯಿದೆಯಿಂದ ಈಗ ರೈತನೇ ಬೆಲೆ ನಿರ್ಧರಿಸುತ್ತಿದ್ದಾನೆ. ಇವತ್ತು ರೈತನ ಮನೆಯಂಗಳಕ್ಕೆ ಮಾರುಕಟ್ಟೆ ಬರುತ್ತಿದೆ. ಇದು ಚಾರಿತ್ರಿಕ ಬದಲಾವಣೆಯಾಗಿದೆ. ಪ್ರತೀ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ಶೀತಲೀಕರಣ ಘಟಕ ಸ್ಥಾಪಿಸುವ ಮೂಲಕ ರೈತರ ಬೆಳೆಗಳಿಗೆ ಸಂರಕ್ಷಣೆ ನೀಡುವ ಗುರಿ ಇದೆ. ಜತೆಗೆ ಗೋದಾಮುಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ.
ಸೋಲಾರ್ ವಿದ್ಯುತ್ ಯೋಜನೆಗಳಿಗೆ ಆದ್ಯತೆ ನೀಡುತ್ತಾ ವಿದ್ಯುತ್ ಸ್ವಾವಲಂಬನೆ ಸಾಧಿಸಲು ಗಮನ ನೀಡಲಾಗುತ್ತಿದೆ. ಮೋದಿ ಮಾದರಿಯನ್ನು ಅನುಸಿಕೊಂಡು ಎಪಿಎಂಸಿಯಲ್ಲಿ ಸೋಲಾರ್ ವಿದ್ಯುತ್ ಘಟಕ ಹಾಗೂ ಗೋದಾಮನ್ನು ಅನುಷ್ಠಾನಕ್ಕೆ ತಂದಿರುವುದಕ್ಕೆ ಅಭಿನಂದಿಸಿದ ಅವರು ಎಪಿಎಂಸಿಗೆ ಶಕ್ತಿ ನೀಡಲು ಸರಕಾರ ಬಜೆಟ್‌ನಲ್ಲಿ ಅನುದಾನ ನೀಡಿದೆ ಎಂದು ಹೇಳಿದ ಅವರು, ಲಕ್ಷಾಂತರ ರೈತರಿಗೆ ಫಸಲ್ ಬಿಮಾ ಮತ್ತು ಕಿಸಾನ್ ಸಮ್ಮಾನ್ ಯೋಜನೆಯ ಫಲ ಸಿಕ್ಕಿದೆ ಎಂದು ಹೇಳಿದರು.
ಸೋಲಾರ್ ವಿದ್ಯುತ್ ಘಟಕ ಉದ್ಘಾಟಿಸಿದ ಬಂದರು ಮತ್ತು ಮೀನುಗಾರಿಕಾ ಖಾತೆಯ ಸಚಿವ ಎಸ್. ಅಂಗಾರ ಮಾತನಾಡಿ, ಕೃಷಿಗೆ ಪೂರಕವಾದ ಸವಲತ್ತುಗಳನ್ನು ನೀಡುತ್ತಾ ಹೋದಂತೆ ಕೃಷಿಕರ ಬದುಕಿನ ಉನ್ನತಿಗೂ ಪೂರಕವಾಗುತ್ತದೆ. ಪುತ್ತೂರು ಎಪಿಎಂಸಿಯಲ್ಲಿ ನಡೆಸಲಾದ ಅಭಿವೃದ್ಧಿ ಕಾರ್ಯಕ್ರಮ ಮಾದರಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ರೈತರಿಗೆ ಅನುಕೂಲಕರವಾದ ವಾತಾವರಣವನ್ನು ಕಲ್ಪಿಸಿಕೊಡುವ ಮೂಲಕ ಪುತ್ತೂರು ಎಪಿಎಂಸಿ ಪರಿಸರ ಸ್ನೇಹಿಯಾಗಿ ಬೆಳೆಯುತ್ತಿರುವುದು ಶ್ಲಾಘನೀಯ ಎಂದರು.
ನಗರಸಭಾ ಅಧ್ಯಕ್ಷ ಜೀವಂಧರ ಜೈನ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ, ಪೂಡಾದ ಅಧ್ಯಕ್ಷ ಬಾಮಿ ಅಶೋಕ್ ಶೆಣೈ, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ವಕ್ವಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಸ್ವಾಗತಿಸಿದರು. ಉಪಾಧ್ಯಕ್ಷ ಎನ್. ಎಸ್. ಮಂಜುನಾಥ್ ವಂದಿಸಿದರು. ನಿರ್ದೇಶಕ ಬಾಲಕೃಷ್ಣ ಬಾಣಜಾಲ್ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕರಾದ ಕೃಷ್ಣಕುಮಾರ್ ರೈ, ಪುಲಸ್ತ್ಯ ರೈ, ತ್ರೀವೇಣಿ ಪೆರ್‍ವೋಡಿ, ಕೊರಗಪ್ಪ, ಮೇದಪ್ಪ ಗೌಡ, ಕುಶಾಲಪ್ಪ ಗೌಡ ಅತಿಥಿಗಳನ್ನು ಹೂ ನೀಡಿ ಶಾಲು ಹಾಕಿ ಸ್ವಾಗತಿಸಿದರು.