ಕೊಣಾಜೆ: ಕಂಬ್ಳಪದವಿನ ಎ.ಕೆ.ಪ್ಲೈ ಬೋರ್ಡ್ ಮಿಲ್ಲಿನ ಬಳಿಯಿರುವ ಕಾರಣಿಕ ಕ್ಷೇತ್ರವಾದ ಮುಚ್ಚಿರ ಕಲ್ಲು ಗುಳಿಗಜ್ಜ ದೈವದ ಕಟ್ಟೆಯ ಮೇಲೆ ಕಿಡಿಗೇಡಿಗಳು ಚಪ್ಪಲಿ ಇಟ್ಟು ಅಪಮಾನಿಸಿ ವಿಕೃತಿ ಮೆರೆದಿದ್ದಾರೆ. ಮುಚ್ಚಿರ ಕಲ್ಲು ಗುಳಿಗ ಸಾನಿಧ್ಯವು ಅತೀ ಕಾರಣೀಕ ಕ್ಷೇತ್ರವಾಗಿದ್ದು ಎಲ್ಲ ಧರ್ಮೀಯರು ಭಕ್ತಿಯಿಂದ ನಮಿಸಿಕೊಂಡು ಬಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಇಲ್ಲಿ ಅನ್ಯಕೋಮಿನ ಯುವಕನೋರ್ವ ದುರಹಂಕಾರದಿಂದ ವಿಕೃತಿ ಮೆರೆದಿದ್ದು ಕೆಲವೇ ದಿವಸಗಳಲ್ಲಿ ಆತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಆನಂತರ ಎಲ್ಲರಿಂದಲೂ ಕೋಮು ಸಾಮರಸ್ಯದ ಪ್ರತೀಕವಾಗಿ ಗುಳಿಗನ ಆರಾಧನೆ ನಡೆದುಕೊಂಡು ಬಂದಿತ್ತು.
ಇಂಥ ಪ್ರದೇಶದಲ್ಲಿ ಕಿಡಿಗೇಡಿಗಳು ಇದೀಗ ಮತ್ತೆ ವಿಕೃತಿ ಮೆರೆದಿದ್ದಾರೆ. ಎರಡು ದಿನಗಳ ಹಿಂದೆ ಕೋಟೆಕಾರು ಕೊಂಡಾಣ ಕ್ಷೇತ್ರದ ಕಾಣಿಕೆ ಹುಂಡಿಯಲ್ಲಿ ಬಳಸಿದ ಕಾಂಡೋಮ್ ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ನಿನ್ನೆ ರಾತ್ರಿ ಕಂಬ್ಳ ಪದವಿನಲ್ಲೂ ದೈವವನ್ನು ಅಪಮಾನ ಮಾಡುವ ಕೃತ್ಯ ನಡೆದಿದೆ.
ಮುಚ್ಚಿರ ಕಲ್ಲು ಕ್ಷೇತ್ರದ ಸಮಿತಿಯ ಮುಖಂಡರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದು , ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾನುವಾರ ಗುಳಿಗಜ್ಜನ ಕಟ್ಟೆಯ ಬಳಿ ಕ್ರಿಕೆಟ್ ಟೂರ್ನಿ ನಡೆದಿದ್ದು, ನಿನ್ನೆ ಸಂಜೆ ಕಟ್ಟೆಯಲ್ಲಿ ಚಪ್ಪಲಿ ಇಟ್ಟಿದ್ದು ಪತ್ತೆಯಾಗಿದೆ.