ತಿರುವನಂತಪುರ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇಂದು ಕೇರಳ ಬಂದ್‌ಗೆ ಕರೆ ನೀಡಿದ್ದು, ಹಿಂಸಾಚಾರ ಆರಂಭವಾಗಿದೆ. ಹಲವು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆದಿದ್ದು ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಯಾವುದೇ ಅನುಮತಿ ಪಡೆಯದೇ ಬಂದ್ ಕರೆ ಕೊಟ್ಟ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್ ಪಿಎಫ್‌ಐ ನಾಯಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ. ಮುಷ್ಕರ ಬೆಂಬಲಿಸದ ನಾಗರಿಕರು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ದಕ್ಕೆಯಾಗದಂತೆ ಎಚ್ಚರಿಕೆ ವಹಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ.
ಗುರುವಾರ ರಾಷ್ಟ್ರೀಯ ತನಿಖಾ ದಳ ದೇಶಾದ್ಯಂತ ಪಿಎಫ್‌ಐ ಮೇಲೆ ದಾಳಿ ನಡೆಸಿ ನಾಯಕರನ್ನು ಬಂಧಿಸಿತ್ತು. ಈ ಬಂಧನವನ್ನು ಖಂಡಿಸಿ ಇಂದು ಬಂದ್‌ಗೆ ಪಿಎಫ್‌ಐ ಕರೆ ನೀಡಿದೆ.
ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು, ಟ್ರಕ್‌ಗಳು ಮತ್ತು ಖಾಸಗಿ ವಾಹನಗಳ ಮೇಲೆ ಮುಂಜಾನೆ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟದಿಂದ ಹಲವು ಬಸ್ ಚಾಲಕರು ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನದ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿದೆ. ಕೊಲ್ಲಂನಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸುವ ಸಮಯದಲ್ಲಿ ಇಬ್ಬರು ಪೊಲೀಸರಿಗೆ ಬೈಕ್ ಡಿಕ್ಕಿ ಹೊಡೆದಿದೆ.

ಕೊಟ್ಟಾಯಂ ಜಿಲ್ಲೆಯ ಎರಟ್ಟುಪೆಟ್ಟಾದಲ್ಲಿ, ಪ್ರತಿಭಟನಾಕಾರರನ್ನು ಚದುರಿಸುವ ಸಮಯದಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಹಲವೆಡೆ ಪಿಎಫ್‌ಐ ಕಾರ್ಯಕರ್ತರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ.
ಖಾಸಗಿ ಬಸ್ಸುಗಳು ರಸ್ತೆಗೆ ಇಳಿಯದ ಪರಿಣಾಮ ಜನ ಸಾಮಾನ್ಯರಿಗೆ ಸಮಸ್ಯೆಯಾಗಿದೆ. ದೂರದ ಸ್ಥಳಗಳಿಂದ ರೈಲು ನಿಲ್ದಾಣಗಳಿಗೆ ಬಂದ ನೂರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ಹಲವು ಶಾಲೆಗಳಿಗೆ ರಜೆ ಘೋಷಣೆಯಾಗಿವೆ. ಮುಸ್ಲಿಂ ಭದ್ರಕೋಟೆಯಾಗಿರುವ ಪ್ರದೇಶಗಳಲ್ಲಿ ಅಂಗಡಿಗಳನ್ನು ಬಲವಂತವಾಗಿ ಬಂದ್ ಮಾಡಲಾಗಿದೆ.
