ಸುಳ್ಯ: ಮದುವೆಗೆ ಎಲ್ಲ ಸಿದ್ಧತೆಗಳನ್ನು ನಡೆಸಿ ಮದುವೆ ಸಭಾಭವನದಲ್ಲಿ ವಧುವಿನ ಕಡೆಯವರು ಬಂದಿದ್ದರೂ, ವರ ಬಾರದ ಹಿನ್ನಲೆಯಲ್ಲಿ ಮದುವೆಯೊಂದು ರದ್ದಾದ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಳ್ಯದ ಉಬರಡ್ಕ ಗ್ರಾಮದ ಯುವತಿಗೆ ಪುತ್ತೂರಿನ ಯುವಕನೊಂದಿಗೆ ಮದುವೆ ನಿಗದಿಯಾಗಿತ್ತು. ಗುರುವಾರ ಸುಳ್ಯದ ಪುರಭವನದಲ್ಲಿ ಮದುವೆ ನಡೆಯಬೇಕಾಗಿತ್ತು. ಮದುಮಗನ ಕಡೆಯಿಂದ ಜನ ಬಂದು ಪುರಭವನದ ಸಭಾಭವನ ಅಲಂಕಾರವೂ ನಡೆದಿತ್ತು. ಬುಧವಾರ ದಿನ ವಧುವಿನ ಮನೆಯಲ್ಲಿ ಡಿ.ಜೆ. ಅಳವಡಿಸಿ ಸಂಭ್ರಮಪಡಲಾಗಿತ್ತು. ಗುರುವಾರ ವಧುವಿನ ಕಡೆಯವರು ಮದುವೆಗಾಗಿ ಸುಳ್ಯದ ಪುರಭವನಕ್ಕೆ ಬಂದು ಸಿದ್ಧತೆ ನಡೆಸಿದ್ದರು. 500 ಮಂದಿಗೆ ಭೋಜನದ ವ್ಯವಸ್ಥೆಯನ್ನೂ ನಡೆಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ವರ ಕಾಣುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿತ್ತು. ಆತನ ಫೋನ್ ನಂಬರಿಗೆ ಕರೆ ಮಾಡುವಾಗ ಸ್ವಿಚ್ ಆಫ್ ಬರುತ್ತಿತ್ತು ಎನ್ನಲಾಗಿದೆ.
ಘಟನೆಯಿಂದ ವಧುವಿನ ಕಡೆಯವರು ಆತಂಕದಿಂದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಮದುವೆ ತಯಾರಿಯಲ್ಲಿದ್ದ ವರನಿಗೆ ಈ ಹಿಂದೆಯೇ ಮದುವೆಯಾಗಿದ್ದು, ಗಂಡ ಬೇರೆ ಮದುವೆಯಾಗಲು ಸಿದ್ಧತೆ ನಡೆಸಿರುವ ಬಗ್ಗೆ ಆತನ ಹೆಂಡತಿ ಬೆಳ್ಳಾರೆ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಯುವಕನನ್ನು ಠಾಣೆಗೆ ಕರೆಯಿಸಿ ಮುಚ್ಚಳಿಕೆ ಬರೆಸಿಕೊಂಡು ಪತ್ನಿ ಜೊತೆ ಕಳುಹಿಸಿಕೊಟ್ಟರು ಎಂದು ತಿಳಿದು ಬಂದಿದೆ.
ಇನ್ನೊಂದೆಡೆ ಮದುವೆ ಹಾಲ್‌ನಲ್ಲಿ ವರನಿಗಾಗಿ ಕಾಯುತ್ತಿದ್ದವರು ಮದುವೆ ನಡೆಯುವುದಿಲ್ಲ ಎಂದು ತಿಳಿದು ಸಭಾಂಗಣದಿಂದ ತಮ್ಮ ಮನೆಯತ್ತ ತೆರಳಿದ್ದಾರೆ. ಸಿದ್ಧಗೊಂಡಿದ್ದ ಊಟವನ್ನು ಸ್ಥಳೀಯ ವಸತಿ ನಿಲಯಗಳಿಗೆ ನೀಡಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ..