ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ರ ಕರ್ನಾಟಕ ಬಜೆಟ್ ಅನ್ನು ಮಂಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಡಿಸಿದ ಕರ್ನಾಟಕ ಬಜೆಟ್ 2023-24ರ ಪ್ರಮುಖಾಂಶಗಳು ಈ ಕೆಳಗಿನಂತಿವೆ..:
ಯಾವ ಇಲಾಖೆಗೆ ಎಷ್ಟು ಅನುದಾನ..!?
- ಶಿಕ್ಷಣ ಇಲಾಖೆಗೆ 37,960 ಕೋಟಿ ರೂ.
- ಜಲಸಂಪನ್ಮೂಲ ಇಲಾಖೆ – 22,854 ಕೋಟಿ ರೂ.
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ – 20,494 ಕೋಟಿ ರೂ.
- ನಗರಾಭಿವೃದ್ಧಿ ಇಲಾಖೆ – 17,938 ಕೋಟಿ ರೂ.
- ಕಂದಾಯ ಇಲಾಖೆ – 15,943 ಕೋಟಿ ರೂ.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – 15,151 ಕೋಟಿ ರೂ.
- ಒಳಾಡಳಿತ ಮತ್ತು ಸಾರಿಗೆ – 14,509 ಕೋಟಿ ರೂ.
- ಇಂಧನ ಇಲಾಖೆ – 13,803 ಕೋಟಿ ರೂ.
- ಸಮಾಜ ಕಲ್ಯಾಣ ಇಲಾಖೆ – 11,163 ಕೋಟಿ ರೂ.
- ಲೋಕೋಪಯೋಗಿ ಇಲಾಖೆ – 10,741 ಕೋಟಿ ರೂ.
- ಕೃಷಿ ಮತ್ತು ತೋಟಗಾರಿಕೆ ಇಲಾಖೆ – 9,456 ಕೋಟಿ ರೂ.
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – 5,676 ಕೋಟಿ ರೂ.
- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ – 4,600 ಕೋಟಿ ರೂ.
- ವಸತಿ ಇಲಾಖೆ – 3,787 ಕೋಟಿ ರೂ.
- ಇತರೆ ಇಲಾಖೆ – 1,16,968 ಕೋಟಿ ರೂ.
ರೈತರಿಗೆ ಬಂಪರ್ ಕೊಡುಗೆ :
ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರೈತರಿಗೆ ಬಂಪರ್ ಅನುದಾನ ಘೋಷಣೆಮಾಡಿದ್ದು,ಅಡಿಕೆ ಬೆಳೆಯ ರೋಗ ನಿರ್ವಹಣೆಗೆ ನೂತನ ತಂತ್ರಜ್ಞಾನ ಅಭಿವೃದ್ಧಿಗೆ 10 ಲಕ್ಷ ಕೋಟಿ ರೂ. ಅನುದಾನ ಘೋಷಿದ್ದು, ದ್ರಾಕ್ಷಿ ಬೆಳೆಗಾರರಿಗೆ 100 ಕೋಟಿ ರೂ. ನೆರವು ಯೋಜನೆ ಆರಂಭಿಸಲಾಗುವುದು. ಜತೆಗೆ, ರೇಷ್ಮೆ ಬೆಳೆ 10 ಸಾವಿರ ಹೆಕ್ಟೇರ್ಗೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ 10,930 ಕೋಟಿ ರೂ. ನೀಡಿದೆ. ಬಿತ್ತನೆಬೀಜ, ರಸಗೊಬ್ಬರ ಇತ್ಯಾದಿಗಳಿಗಾಗಿ 962 ಕೋಟಿ ರೂ. ವ್ಯಯಿಸಲಾಗಿದೆ. ರಾಜ್ಯದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಪರಿಹಾರ ಹೆಚ್ಚಿಸಿ ದಾಖಲೆ ಅವಧಿಯಲ್ಲಿ ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ಜಮೆ ಮಾಡಲಾಗಿದೆ. 14 ಲಕ್ಷಕ್ಕೂ ಹೆಚ್ಚು ರೈತರ ಖಾತೆಗಳಿಗೆ ಪರಿಹಾರದ ಹಣ ವರ್ಗಾಯಿಸಲಾಗಿದೆ.
ಇನ್ನು ಭೂಸಿರಿ ಎಂಬ ನೂತನ ಯೋಜನೆ ಅಡಿ 10,000 ರೂ. ಸಹಾಯಧನ ನೀಡಲು ಉದ್ದೇಶಿಸಲಾಗಿದೆ. ರೈತ ಸಿರಿ ಯೋಜನೆಯಡಿಯಲ್ಲಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟರ್ಗೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ಘೋಷಣೆ. ಸಹ್ಯಾದ್ರಿ ಯೋಜನೆಯಡಿಯಲ್ಲಿ ಕರಾವಳಿ ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗಾಗಿ ಬಾವಿ, ಕಿಂಡಿ ನಾಳ ಅಭಿವೃದ್ಧಿ ಕಾಮಗಾರಿಗೆ 75 ಕೋಟಿ ರೂ. ಅನುದಾನ ಮೀಸಲಿಡಲಾಗುವುದು ಎಂದು ಸಿಎಂ ಘೋಷಣೆ.
ಈ ಬಾರಿ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 5 ಲಕ್ಷ ರೂ. ಸಾಲ ಘೋಷಿಸಿದ್ದು, 30 ಲಕ್ಷಕ್ಕಿಂತ ಹೆಚ್ಚು ರೈತರಿಗೆ 25 ಸಾವಿರ ಕೋಟಿ ಸಾಲ, ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ, 2023-24ನೇ ಸಾಲಿನಿಂದ ಹೆಚ್ಚುವರಿಯಾಗಿ 10 ಸಾವಿರ ರೂ ಸಹಾಯಧನ ಘೋಷಿಸಿದ್ದಾರೆ.
‘ಜೀವಸುಧೆ’, ‘ಮನೆ ಮನೆಗೆ ಆರೋಗ್ಯ’ ಯೋಜನೆ ಘೋಷಣೆ :
- ಕರ್ನಾಟಕ ಮೆಂಟಲ್ ಹೆಲ್ತ್ ಯೋಜನೆಯನ್ನು 25 ಕೋಟಿ ರೂ ವೆಚ್ಚದಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸಲು ನಿರ್ಧಾರ
ಎಲ್ಲಾ ಜಿಲ್ಲೆಗಳಲ್ಲಿ Hand Held X-ray ಯಂತ್ರಗಳ ಸಹಾಯದಿಂದ ಕ್ಷಯ ರೋಗಿಗಳ ಆರಂಭಿಕ ತಪಾಸಣೆ & ಚಿಕಿತ್ಸೆಗಾಗಿ ಸಮುದಾಯ ಆಧಾರಿತ ತಪಾಸಣೆ ಚಟುವಟಿಕೆ ನಡೆಸಲು 12.50 ಕೋಟಿ ರೂ.
ಸ್ತನ, ಬಾಯಿ ಮತ್ತು ಗರ್ಭಕಂಠದ ಕ್ಯಾನ್ಸರ್ ಪತ್ತೆ ಹಚ್ಚಲು ‘ಜೀವಸುಧೆ’ ಎಂಬ ವ್ಯಾಪಕ ತಪಾಸಣಾ ಕಾರ್ಯಕ್ರಮ- ಕ್ಯಾನ್ಸರ್ ಪತ್ತೆಗೆ ಅಗತ್ಯವಿರುವ ಸಾಧನಗಳ ಖರೀದಿಗಾಗಿ 12 ಕೋಟಿ ರೂ. ಅನುದಾನ
- ಅಂಗಾಂಗ ಜೋಡಣೆಗೆ ಮೀಸಲಾದ ದೇಶದ ಪ್ರಥಮ ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು.
ಹೆಚ್ಚುವರಿಯಾಗಿ 50 ಡಯಾಲಿಸಿಸ್ ಹಾಸಿಗೆಗಳು ಮತ್ತು 300 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳನ್ನು
ಸ್ಥಾಪನೆ- ಮಹಾನಗರದ ಆರೋಗ್ಯ ಆಡಳಿತ ವ್ಯವಸ್ಥೆಯನ್ನು ಬೆಂಗಳೂರು ಹೆಲ್ತ್ ಸಿಸ್ಟಮ್ಸ್ ಎಂದು ಪುನರ್ ರಚನೆ
- ಮನೆ ಮನೆಗೆ ಆರೋಗ್ಯ’ ಎಂಬ ಕಾರ್ಯಕ್ರಮದಡಿಯಲ್ಲಿ ರಾಜ್ಯದ ಗ್ರಾಮೀಣ ಜನತೆಗೆ 2023-24ನೇ ಸಾಲಿನಲ್ಲಿ ಎರಡು ಬಾರಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಆಯೋಜನೆ
- ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು.
- ಮೈಸೂರು, ಶಿವಮೊಗ್ಗ ಮತ್ತು ಕಲಬುರಗಿಗಳಲ್ಲಿ ಕಿದ್ವಾಯಿ ಸಂಸ್ಥೆಯಡಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
- ರಾಯಚೂರಿನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆ ಸ್ಥಾಪಿಸಲಾಗುವುದು.
- ಬೆಂಗಳೂರಿನ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ
100 ಕೋಟಿ ರೂ. ವೆಚ್ಚದಲ್ಲಿ ಮಕ್ಕಳ ಬಸ್ಸು ಯೋಜನೆ :
100 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯಡಿ 1000 ಹೊಸ ಶಾಲಾ-ಕಾಲೇಜು ಮಕ್ಕಳ ಬಸ್ ಓಡಾಟ ನಡೆಸಲಿದ್ದು, ಇದರಿಂದ ಹೆಚ್ಚುವರಿಯಾಗಿ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ರಾಜ್ಯ ಬಜೆಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಕರ್ನಾಟಕದ ಎಲ್ಲಾ ಪ್ರೌಢ ಶಾಲಾ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ದೃಷ್ಟಿಯಿಂದ ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಆರಂಭಿಸುವುದಾಗಿ ಎಂದು ಘೋಷಿಸಿದ್ದಾರೆ.
ಸಿನಿಮಾ ರಂಗಕ್ಕೆ ಸಿಕ್ಕಿದ್ದೇನು..!!?
ಈ ಬಾರಿಯ ಬಜೆಟ್ ನಲ್ಲಿ ಸಿನಿಮಾ ರಂಗಕ್ಕೆ ಸಿಕ್ಕಿದ್ದೇನು ಎಂದು ನೋಡುವುದಾದರೆ, ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡಲು ರಾಜ್ಯದ ಟೈರ್ -2 ನಗರಗಳಲ್ಲಿ 100 ರಿಂದ 200 ಆಸನಗಳ ಸಾಮರ್ಥ್ಯವುಳ್ಳ ಮಿನಿ ಥಿಯೇಟರ್ ಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಲಾಗುತ್ತಿದೆ.
ಜೊತೆಗೆ ನಗರ ಹಾಗೂ ಪಟ್ಟಣಗಳಲ್ಲಿ ಖಾಲಿ ಇರುವ ಜಾಗಗಳನ್ನು ಗುರುತಿಸಿ, ಖ್ಯಾತ ನಟರಾದ ದಿವಗಂತ ಶಂಕರ್ ನಾಗ್ ಅವರ ಹೆಸರಿನಲ್ಲಿ ಟ್ಯಾಕ್ಸ್ ಹಾಗೂ ಆಟೋ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಬಜೆಟ್ ನಲ್ಲಿ ಉಲ್ಲೇಖಿಸಲಾಗಿದೆ.
ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಘೋಷಣೆ :
2023-24ರ ರಾಜ್ಯ ಬಜೆಟ್‍ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದ್ದು, ಸರ್ಕಾರ ಉಚಿತ ಬಸ್ ಪಾಸ್ ಘೋಷಣೆ ಮಾಡಲಾಗಿದೆ.
ವಿದ್ಯಾವಾಹಿನಿ ಯೋಜನೆಯಡಿ 350 ಕೋಟಿ ವೆಚ್ಚದಲ್ಲಿ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಲಾಗುವುದು. ಇದರಿಂದ ರಾಜ್ಯದ 8 ಲಕ್ಷ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ.
ಜೊತೆಗೆ ಶಾಲಾ-ಕಾಲೇಜುಗಳ ಮಕ್ಕಳ ಬಸ್ಸು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಬಸ್ ಯೋಜನೆ ಪ್ರಾರಂಭಕ್ಕೆ ನಿರ್ಧಾರ ಮಾಡಲಾಗುತ್ತಿದೆ. ಇದಕ್ಕಾಗಿ 100 ಕೋಟಿ ವೆಚ್ಚದಲ್ಲಿ 1000 ಹೊಸ ಬಸ್‍ಗಳ ಕಾರ್ಯಾಚರಣೆ ನಡೆಯುತ್ತಿದೆ. ಇದರಿಂದ ಹೆಚ್ಚುವರಿಯಾಗಿ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಾರಾಯಣ ಗುರು ವಸತಿ ಶಾಲೆ ಪ್ರತಿ ಶಾಲೆಗೆ 18 ಕೋಟಿ ವೆಚ್ಚ ವ್ಯಯಿಸಲಾಗುವುದು ಎಂದು ತಿಳಿಸಿದ್ದಾರೆ.
ದೋಣಿಗಳಲ್ಲಿ ಪೆಟ್ರೋಲ್, ಡೀಸೆಲ್ ಇಂಜಿನ್ ಅಳವಡಿಕೆಗೆ 50 ಸಾವಿರ ಸಹಾಯಧನ :
2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಉಡುಗೊರೆ ನೀಡಿದ್ದಾರೆ. ಎಲ್ಲಾ ಸೀಮೆಎಣ್ಣೆ ಆಧಾರಿತ ದೋಣಿಗಳಲ್ಲಿ ಪೆಟ್ರೋಲ್/ಡೀಸೆಲ್ ಆಧಾರಿತ ಮೋಟಾರ್ ಇಂಜಿನ್ ಅನ್ನು ಅಳವಡಿಸಲು ತಲಾ 50 ಸಾವಿರ ರೂ. ನಂತೆ ಸಹಾಯಧನ ನೀಡಲಾಗುವುದು ಎಂದು ಬೊಮ್ಮಾಯಿ ಘೋಷಿಸಿದರು.
ಸೀಮೆಎಣ್ಣೆ ಬಳಕೆಯಿಂದ ಉಂಟಾಗುವ ಪರಿಸರ ಮಾಲಿನ್ಯ ಮತ್ತು ಅದರ ಬೆಲೆಯ ಏರಿಳಿತದಿಂದ ದೋಣಿಗಾರರಿಗೆ ಉಂಟಾಗುವ ಆರ್ಥಿಕ ಸಂಕಷ್ಟ ತಪ್ಪಿಸಲು ಮುಂದಿನ 2 ವರ್ಷಗಳಲ್ಲಿ ಎಲ್ಲಾ ಸೀಮೆಎಣ್ಣೆ ಆಧಾರಿತ ದೋಣಿಗಳಲ್ಲಿ ಪೆಟ್ರೋಲ್/ಡೀಸೆಲ್ ಆಧಾರಿತ ಮೋಟಾರ್ ಇಂಜಿನ್ ಅನ್ನು ಅಳವಡಿಸಲು ತಲಾ 50 ಸಾವಿರ ರೂ. ನಂತೆ ಸಹಾಯಧನ ನೀಡಲಾಗುವುದು. ಇದಕ್ಕಾಗಿ ಪ್ರಸಕ್ತ ವರ್ಷದಲ್ಲಿ 40 ಕೋಟಿ ರೂ. ಗಳನ್ನು ಮೀಸಲಿಡಲಾಗುವುದು. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮುಂದಿನ 2 ವರ್ಷಗಳ ಅವಧಿಗೆ ಸೀಮೆಎಣ್ಣೆ ಸಹಾಯಧನ ಮುಂದುವರೆಸಲಾಗುವುದು ಎಂದು ತಿಳಿಸಿದರು.
ಆಳಸಮುದ್ರ ಮೀನುಗಾರಿಕೆಯನ್ನು ಇನ್ನಷ್ಟು ಉತ್ತೇಜಿಸಲು 100 ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ ಪ್ರಧಾನ ಮಂತ್ರಿ ʻಮತ್ಸ್ಯ ಸಂಪದʼ ಯೋಜನೆಯೊಂದಿಗೆ ಸಂಯೋಜಿಸಿ ʻ ಮತ್ಸ ಸಿರಿʼ ವಿಶೇಷ ಯೋಜನೆಯನ್ನು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ರೂಪಿಸಲಾಗಿದೆ. ಆಯ್ಕೆಯಾದ ಎಲ್ಲಾ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ದೋಣಿ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ.
ಪ್ರತಿ ಗ್ರಾಮ ಪಂಚಾಯತ್‍ಗೆ 60 ಲಕ್ಷ ರೂ.ಗಳಷ್ಟು ಅನುದಾನ :
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಪ್ರತಿ ಗ್ರಾಮ ಪಂಚಾಯತ್‍ಗೆ 22 ರಿಂದ 60 ಲಕ್ಷ ಅನುದಾನವನ್ನು ಘೋಷಣೆ ಮಾಡಿದ್ದಾರೆ.
ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಸಶಕ್ತಗೊಳಿಸಲು ಮತ್ತು ಜನರಿಗೆ ಗ್ರಾಮ ಪಂಚಾಯಿತಿಗಳ ಮುಖಾಂತರ ಸ್ಥಳೀಯವಾಗಿಯೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅವಕಾಶ ಮಾಡಲಾಗುವುದು. ಪ್ರಸ್ತುತ ಗ್ರಾಮ ಪಂಚಾಯಿತಿಗಳಿಗೆ, ಜನಸಂಖ್ಯೆ ಆಧರಿಸಿ 12 ಲಕ್ಷ ರೂ. ಗಳಿಂದ 35 ಲಕ್ಷ ರೂ. ಗಳವರೆಗೆ ರಾಜ್ಯ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ.
2023-24ನೇ ಸಾಲಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಗೆ 22 ರಿಂದ 60 ಲಕ್ಷ ರೂ. ಗಳಷ್ಟು ಅನುದಾನ ಲಭ್ಯಪಡಿಸಲು 780 ಕೋಟಿ ರೂ. ಗಳ ಒಂದು ಬಾರಿಯ ವಿಶೇಷ ಅನುದಾನ ಒದಗಿಸಲಾಗುವುದು. ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ಸರ್ಕಾರವು ಹೆಚ್ಚಿನ ಮಹತ್ವವನ್ನು ನೀಡಿದೆ. ಪ್ರಸಕ್ತ ಸಾಲಿನಲ್ಲಿ 2,070 ಕೋಟಿ ರೂ. ಗಳ ವೆಚ್ಚದಲ್ಲಿ 4,504 ಕಿ.ಮೀ. ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಗ್ರಾಮೀಣ ಭಾಗದ ರಸ್ತೆಗಳ ಮತ್ತು ಕೃಷಿ ಭೂಮಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗಾಗಿ, ನರೇಗಾ ಜೊತೆಗೆ ಸಂಯೋಜಿಸಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 25 ಕಿ.ಮೀ. ನಂತೆ ಒಟ್ಟಾರೆಯಾಗಿ 5,000 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು 300 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದಿದ್ದಾರೆ.
ಗ್ರಾಮ ಸಹಾಯಕ, ಅಂಗನವಾಡಿ-ಆಶಾ ಕಾರ್ಯಕರ್ತೆಯರ ಸಹಾಯಧನ ಹೆಚ್ಚಳ:
2023-24ರ ಆಯವ್ಯಯ ಪತ್ರದಲ್ಲಿ ಗ್ರಾಮ ಸಹಾಯಕ, ಅಂಗನವಾಡಿ-ಆಶಾ ಕಾರ್ಯಕರ್ತೆಯರ ಸಹಾಯಧನ ಹೆಚ್ಚಳ ಮಾಡುವ ಘೋಷಣೆ ಮಾಡಿದ್ದಾರೆ.
ಗ್ರಾಮ ಸಹಾಯಕರ ಹುದ್ದೆಯನ್ನು ‘ಜನಸೇವಕ’ ಎಂದು ಮರುನಾಮಕರಣ ಮಾಡಲಾಗಿದೆ. ಗ್ರಾಮ ಸಹಾಯಕರ ಮಾಸಿಕ ಗೌರವಧನ 13,000 ರೂ. ಗಳಿಂದ. 14,000 ರೂ. ಗೆ ಹೆಚ್ಚಳ ಮಾಡಲಾಗುವುದು ಎಂದು ಘೋಷಿಸಿದರು.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಹಾಯಧನವನ್ನು 1000 ರೂ. ನಿಂದ 1500 ರೂ.ಗೆ ಏರಿಕೆ ಮಾಡಲಾಗುವುದು ಎಂದು ಘೋಷಿಸಿದರು.
ಮನೆ ಮನೆಗೆ ಆರೋಗ್ಯ ಕಾರ್ಯಕ್ರಮ ಜಾರಿ ಮಾಡುತ್ತಿದ್ದು, ಹಾವೇರಿ ಜಿಲ್ಲೆ ಸವಣೂರಿನಲ್ಲಿ 165 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದರು.
ಬೆಂಗಳೂರು ಅಭಿವೃದ್ಧಿಗೆ ಭರ್ಜರಿ ಕೊಡುಗೆ:
ಬೆಂಗಳೂರು ಅಭಿವೃದ್ಧಿಗೆ ಭರ್ಜರಿ ಯೋಜನೆಗಳನ್ನು ಘೋಷಿಸಲಾಗಿದೆ.
ಬೃಹತ್ ನಗರವಾಗಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿಯಲ್ಲಿನ ಸುಗಮ ಸಂಚಾರ, ರಸ್ತೆ, ರಾಜಕಾಲುವೆಗಳ ಅಭಿವೃದ್ಧಿಯ ಮೂಲಕ ಪ್ರವಾಹ ತಡೆಗಟ್ಟುವುದು. ವೈಜ್ಞಾನಿಕ ಹಾಗೂ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ರೂಪಿಸಲು ಆದ್ಯತೆ ನೀಡಲಾಗುವುದು ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ.
ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರು ನಗರದಲ್ಲಿ 6,000 ಕೋಟಿ ರೂ.ವೆಚ್ಚದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮಳೆ ನೀರು ಮುಕ್ತವಾಗಿ ಹರಿಯಲು ಮತ್ತು ಪ್ರವಾಹ ತಪ್ಪಿಸಲು ಒಟ್ಟು 195 ಕಿಲೋ ಮೀಟರ್ ಉದ್ದದ ಚರಂಡಿ ಮತ್ತು ರಿವಿಟ್ ಅಭಿವೃದ್ಧಿಗಾಗಿ 1,813 ಕೋಟಿ ರೂ. ನೀಡಲಾಗುವುದು. ಅಲ್ಲದೇ ಅಧಿಕ ಜನಸಂಖ್ಯೆ ಯೋಜನೆಯಡಿ ಒಟ್ಟು 108 ಕಿಲೋ ಮೀಟರ್ ರಸ್ತೆಗಳನ್ನು 273 ಕೋಟಿ ರೂ.ಗಳ ಅಂದಾಜಿನಲ್ಲಿ ನಿರ್ಮಿಸಲಾಗುವುದು ಎಂದು ಬಜೆಟ್ ನಲ್ಲಿ ಭರವಸೆ ನೀಡಲಾಗಿದೆ.
ಬೆಂಗಳೂರು ನಗರದ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರಮುಖ 75 ಜಂಕ್ಷನ್ ಗಳನ್ನು 150 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. AI ತಂತ್ರಜ್ಞಾನ ಬಳಕೆಯೊಂದಿಗೆ ಟ್ರಾಫಿಕ್ ಸಿಗ್ನಲ್ ಗಳ ನಿರ್ವಹಣೆ ಮಾಡಲು ಸಂಚಾರ ದಟ್ಟಣೆ ಕಡಿಮೆ ಮಾಡಲು ಉದ್ದೇಶಿಸಲಾಗಿದೆ.
ಬೆಂಗಳೂರಿನ 23 ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಮತ್ತು 27 ಸ್ಮಾರ್ಟ್ ವರ್ಚುವಲ್ ಕ್ಲಿನಿಕ್:
ರಾಜಧಾನಿಯಲ್ಲಿ ಸುಲಭ ದರದಲ್ಲಿ ಆರೋಗ್ಯ ಸೇವೆ ಲಭ್ಯವಾಗುವ ನಿಟ್ಟಿನಲ್ಲಿ 243 ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಮತ್ತು 27 ಸ್ಮಾರ್ಟ್ ವರ್ಚುವಲ್ ಕ್ಲಿನಿಕ್ ತೆರೆಯಲು ಅನುಮೋದನೆ ನೀಡಲಾಗಿದೆ. ಹೆಚ್ಚುವರಿಯಾಗಿ 50 ಡಯಾಲಿಸಿದ್ ಹಾಸಿಗೆಗಳು, 300 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಒದಗಿಸಲಾಗುವುದು ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ.
ನಿರುದ್ಯೋಗಿಗಳಿಗೆ ತಲಾ 2,000 ರೂಪಾಯಿ ಆರ್ಥಿಕ ನೆರವು :
2023-24ನೇ ಬಜೆಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿಸರ್ಕಾರ ನಿರುದ್ಯೋಗಿಗಳಿಗೆ ಬಂಪರ್ ಕೊಡುಗೆ ಘೋಷಿಸಿದೆ. ಪದವಿ ಶಿಕ್ಷಣವನ್ನು ಮುಗಿಸಿ, ಮೂರು ವರ್ಷಗಳ ನಂತರವೂ ಯಾವುದೇ ಉದ್ಯೋಗ ದೊರೆಯದೆ ಇದ್ರೆ 2,000 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.
‘ಯುವಸ್ನೇಹಿ’ ಎಂಬ ಹೊಸ ಯೋಜನೆಯಡಿ ತಲಾ 2,000 ರೂಪಾಯಿ ನೀಡಲಾಗುವುದು. ಒಂದು ಬಾರಿ ಮಾತ್ರ ಆರ್ಥಿಕ ನೆರವು ಸಿಗಲಿದೆ. ಇನ್ನು ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ಧನ ನೀಡಲಾಗುವುದು ಎಂದು ಘೋಷಿಸಲಾಗಿದೆ.
ರಾಮದೇವರ ಬೆಟ್ಟದಲ್ಲಿ ಭವ್ಯ ರಾಮಮಂದಿರ, ಮಂಚನಬೆಲೆ ಜಲಾಶಯ ಹಿನ್ನೀರಿನಲ್ಲಿ ರೆಸಾರ್ಟ್ :
ರಾಮನಗರದಲ್ಲಿರುವಂತಹ ರಾಮದೇವರ ಬೆಟ್ಟದಲ್ಲಿ ಭವ್ಯವಾದ ರಾಮ ಮಂದಿರನ್ನು ನಿರ್ಮಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿ ಈ ಬಾರಿಯ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಮಂಚನಬೆಲೆ ಜಲಾಶಯ ಹಿನ್ನೀರಿನಲ್ಲಿ 10 ಎಕರೆ ಪ್ರದೇಶದಲ್ಲಿ 10 ಕೋಟಿ ವೆಚ್ಚದಲ್ಲಿ ಜಂಗಲ್ ಲಾಡ್ಜಸ್ ಹಾಗೂ ರೆಸಾರ್ಟ್ ಲಿಮಿಟೆಡ್ ಮೂಲಕ ರೆಸಾರ್ಟ್ ನಿರ್ಮಾಣದ ಘೋಷಣೆ ಮಾಡಲಾಗಿದೆ.
ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ : 100 ಕೋಟಿ ರೂ. ಅನುದಾನ :
ಕ್ರೀಡಾ ಕ್ಷೇತ್ರಕ್ಕೂ ಒತ್ತು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರ 2023ರ ಬಜೆಟ್‌ನಲ್ಲಿ ಹಲವು ಕೊಡುಗೆಗಳನ್ನು ತೆರೆದಿಟ್ಟಿದೆ.
100 ಕೋಟಿ ರೂಪಾಯಿಗಳ ಅನುದಾನವನ್ನು ಕ್ರೀಡಾ ಕ್ಷೇತ್ರಕ್ಕೆ ಮೀಸಲಿಡಲಾಗಿದೆ. ಈ ದೊಡ್ಡ ಬಜೆಟ್‌ನಲ್ಲಿ ವಿಕಲಚೇತನ ಕ್ರೀಡಾಪಟುಗಳಿಗೂ ಸೌಲಭ್ಯ ಕಲ್ಪಿಸಲಾಗಿದೆ. ಅಂದಹಾಗೆಯೇ 2023ರ ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿಯವರು ಕ್ರೀಡಾ ಕ್ಷೇತ್ರಕ್ಕೆ ಏನೆಲ್ಲಾ ಮೀಸಲಿಟ್ಟಿದ್ದಾರೆ ಎಂದು ನೋಡೋಣ..
- ಎಲ್ಲಾ ಜಿಲ್ಲಾ ಹಾಗೂ ತಾಲೂಕುಗಳಲ್ಲಿ ಹೊರಾಂಗಣ ಜಿಮ್
- ಈ ಕ್ರೀಡಾಂಗಣದಲ್ಲಿ ಮಹಿಳೆಯರು, ವಿಕಲಚೇನರಿಗೂ ಸೌಲಭ್ಯ
- ಇದಕ್ಕಾಗಿ 100 ಕೋಟಿ ರೂಪಾಯಿಗಳ ಅನುದಾನ ಮೀಸಲು
- ಖಾಸಗಿ ಕ್ರೀಡಾ ಸಂಸ್ಥೆಗಳಿಗೆ 25 ಲಕ್ಷ ರೂ. ಪ್ರೋತ್ಸಾಹ ಧನ
- ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನ ರೂಪಿಸುವ ಸಂಸ್ಥೆಗಳಿಗೆ ನೆರವು
- ಗ್ರಾಮೀಣ ಕ್ರೀಡೆ ಪ್ರೋತ್ಸಾಹಿಸಲು 5 ಕೋಟಿ ವೆಚ್ಚದಲ್ಲಿ ಕ್ರೀಡಾ ಅಂಕಣ
- ಕಂಬಳ, ಕಬಡ್ಡಿ, ಕುಸ್ತಿ, ಎತ್ತಿನಗಾಡಿ ಓಟ ಪ್ರೋತ್ಸಾಹಕ್ಕೆ ಕ್ರಮ
- ಯುವ ಪ್ರತಿಭೆ ಪ್ರೋತ್ಸಾಹಕ್ಕೆ ‘ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ’
- ಪ್ರಸಕ್ತ ಸಾಲಿನಿಂದಲೇ ವಿವಿಧ ಕ್ಷೇತ್ರಗಳ ಐವರಿಗೆ ಪುರಸ್ಕಾರ