ಉಡುಪಿ: ಅಮಾನವೀಯ ಕೃತ್ಯದಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಸಹ ಕಾರ್ಮಿಕನ ಮೃತದೇಹವನ್ನು ರಸ್ತೆ ಬದಿ ಎಸೆದು ಪರಾರಿಯಾಗಿರುವ ಘಟನೆ ಕೆಮ್ಮಣ್ಣು ಗ್ರಾಮ ಪಂಚಾಯತ್ ಬಳಿ ನಡೆದಿದೆ.
ಕೃತ್ಯಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಅವುಗಳ ಪ್ರಕಾರ ಇಬ್ಬರು ವ್ಯಕ್ತಿಗಳು ಗೂಡ್ಸ್ ಟೆಂಪೋದಲ್ಲಿ ಬಂದು ಮೃತದೇಹವನ್ನು ರಸ್ತೆಬದಿಯಲ್ಲಿ ಎಸೆದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಮಾಜ ಸೇವಕ ಈಶ್ವರ ಮಲ್ಪೆ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದಿದ್ದಾರೆ.
ಮೃತ ವ್ಯಕ್ತಿಯನ್ನು ಹಾನಗಲ್ ನ ಹನುಮಂತ ಎಂದು ಗುರುತಿಸಲಾಗಿದೆ.
ಮಾಹಿತಿ ಪ್ರಕಾರ ಟೆಂಪೋದಲ್ಲಿ ಬಂದ ಇಬ್ಬರು ಹಾನಗಲ್ ಜಿಲ್ಲೆಯ ತರಕಾರಿ ಮಾರಾಟಗಾರರು. ಮೃತಪಟ್ಟ ವ್ಯಕ್ತಿ ಅವರ ಜೊತೆಯಲ್ಲೇ ತರಕಾರಿ ಮಾರುವವರಾಗಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲ ದಿನಗಳಿಂದ ಚೇತರಿಸಿಕೊಳ್ಳದೆ ಟೆಂಪೋ ಹಿಂಬದಿಯಲ್ಲಿ ಮಲಗಿದ್ದರು. ಅಸ್ವಸ್ಥ ಕಾರ್ಮಿಕ ಸಾವನ್ನಪ್ಪಿದ್ದಾನೆ ಎಂದು ತಿಳಿದ ಬಳಿಕ ಉಳಿದ ಇಬ್ಬರು ಆತನ ಮೃತದೇಹವನ್ನು ರಸ್ತೆಬದಿ ಎಸೆದು ಪರಾರಿಯಾಗಿದ್ದಾರೆ.
ಸಿಸಿಟಿವಿ ಆಧಾರದಲ್ಲಿ ವಾಹನ ಹಾಗೂ ಕೃತ್ಯ ಎಸಗಿದ ವ್ಯಕ್ತಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.