ವಿಟ್ಲ: ಅಡ್ಯನಡ್ಕದ ಕಾರ್ಯಾಗಾರಕ್ಕೆ ಮಕ್ಕಳನ್ನು ಕಳುಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ.ಆರ್. ನಾಯ್ಕ್ ರನ್ನು ತಾತ್ಕಾಲಿಕವಾಗಿ ಸೇವೆಯಿಂದ ಅಮಾನತುಗೊಳಿಸಿ ಅಡ್ಯನಡ್ಕ ಎಜ್ಯುಕೇಶನ್ ನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಫೆ.18 ರಂದು 10ನೇ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಆಡಳಿತ ಮಂಡಳಿಯ ಅವಗಾಹನೆಗೆ ತಾರದೆ ಶೈಕ್ಷಣಿಕ ಕಾರ್ಯಗಾರಕ್ಕೆ ಕಳುಹಿಸಿದ ಹಿನ್ನೆಲೆ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ.ಆರ್. ನಾಯ್ಕ್ ರನ್ನು ತಾತ್ಕಾಲಿಕವಾಗಿ ಸೇವೆಯಿಂದ ಅಮಾನತುಗೊಳಿಸಿ ಅಡ್ಯನಡ್ಕ ಎಜ್ಯುಕೇಶನ್ ನ ಕಾರ್ಯದರ್ಶಿ ಆದೇಶಿಸಿದ್ದಾರೆ..
ಶೈಕ್ಷಣಿಕ ಕಾರ್ಯಾಗಾರದಲ್ಲಿ ಇಸ್ಲಾಂ ಮತದ ಬಗ್ಗೆ ಮತ ಪ್ರವಚನ ಮಾಡುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದ ಹಿನ್ನೆಲೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಆಗಮಿಸಿ ಹಿಂದೂ ವಿದ್ಯಾರ್ಥಿಗಳನ್ನು ಹೊರಕ್ಕೆ ಕಳುಹಿಸಿದ ಘಟನೆ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸುವಂತೆ ಬಿಜೆಪಿ ಹಾಗೂ ಹಿಂದೂ ಮುಖಂಡರು ಠಾಣೆಗೆ ಭೇಟಿ ನೀಡಿ ಆಗ್ರಹಿಸಿದ್ದರು.
ನುಸ್ರುತುಲ್ ಇಸ್ಲಾಮಿಕ್ ಯಂಗ್ ಮೆನ್ಸ್ ಅಸೋಸಿಯೇಷನ್(NIYA) ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರಕ್ಕೆ ಅಡ್ಯನಡ್ಕ ಜನತಾ ಹೈಸ್ಕೂಲ್ ನ ವಿದ್ಯಾರ್ಥಿಗಳನ್ನು ಅದರಲ್ಲೂ ಹಿಂದೂ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ತೆರಳುವಂತೆ ಶಾಲಾ ಪ್ರಾಂಶುಪಾಲರಾದ ರುದ್ರಪ್ಪ ನಾಯ್ಕ್ ತಿಳಿಸಿದ್ದಾಗಿ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದು, ಈ ಹಿನ್ನೆಲೆ ಮಕ್ಕಳ ಹಾದಿ ತಪ್ಪಿಸುತ್ತಿರುವ ಪ್ರಾಂಶುಪಾಲರ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಜೆಪಿ ಹಾಗೂ ಹಿಂದೂ ಮುಖಂಡರು ಪೊಲೀಸ್ ಅಧಿಕಾರಿಗಳ ಬಳಿ ಆಗ್ರಹಿಸಿದ್ದರು. ಬಳಿಕ ಠಾಣೆಯಲ್ಲಿ ಆಯೋಜಕರ ವಿರುದ್ಧ ಹಾಗೂ ಮುಖ್ಯೋಪಾಧ್ಯಯರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಮುಖಂಡ ಹರಿಪ್ರಸಾದ್ ಯಾದವ್, ವಿಟ್ಲ ಮಹಾಶಕ್ತಿಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ದಯಾನಂದ ಉಜಿರೆಮಾರ್, ಶ್ರೀಕೃಷ್ಣ ವಿಟ್ಲ, ಅಕ್ಷಯ್ ರಜಪೂತ್, ಗಣೇಶ್ ಅಡ್ಯನಡ್ಕ, ಕೇಪು ಗ್ರಾಮಪಂಚಾಯತ್ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ, ಮಾಜಿ ಅಧ್ಯಕ್ಷ ತಾರಾನಾಥ್ ಆಳ್ವ, ಪುರುಷೋತ್ತಮ ಕಲ್ಲಂಗಳ, ಉಪಾಧ್ಯಕ್ಷ ರಾಘವ ಮಣಿಯಾಣಿ ,ಜಾಗರಣ ಪ್ರಮುಖ್ ಹರ್ಷ ರೈ ಕಲ್ಲಂಗಳ.. ನವೀನ್ ಕೋಲ್ಪೆ ಹಾಗೂ ಕಾರ್ಯಕರ್ತರು ಠಾಣೆಗೆ ಭೇಟಿ ನೀಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು..