ಪುತ್ತೂರು:ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರುಡುತ್ತಿದ್ದು ಜನರಿಗೆ ತುರ್ತು ಸೇವೆಗಳಾದ ಔಷಧಿ, ಆಂಬ್ಯುಲೆನ್ಸ್, ಲಸಿಕೆಗಳನ್ನು ಸಕಾಲದಲ್ಲಿ ಒದಗಿಸಲು ಅಧಿಕಾರಿಗಳು ನಿಗಾ ವಹಿಸುವಂತೆ ಶಾಸಕ ಸಂಜೀವ ಮಠಂದೂರು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆಯಲ್ಲಿ ಸೂಚನೆ ನೀಡಿದರು.
ಸಭೆಯು ಎ.24ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಆರೋಗ್ಯ ಇಲಾಖೆ, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವ ಸೌಲಭ್ಯ ಹಾಗೂ ಬೇಡಿಕೆಗಳ ಕುರಿತು ಮಾಹಿತಿ ಪಡೆದುಕೊಂಡ ಶಾಸಕರು, ಸರಕಾರಿ ಆಸ್ಪತ್ರೆ, ಮೊರಾರ್ಜಿದೇಸಾಯಿ ಶಾಲೆಯಲ್ಲಿ ಕೋವಿಡ್ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿದೆ. ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗುವುದು. ಪುತ್ತೂರಿನಲ್ಲಿಯೂ ಬೆಂಗಳೂರಿನಂತಹ ಪರಿಸ್ಥಿತಿ ಬಂದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಎಲ್ಲದಕ್ಕೂ ಸಿದ್ದರಾಗಿರಬೇಕು ಎಂದು ತಿಳಿಸಿದರು.
ಅನಿವಾರ್ಯವಾದರೆ ಸಹಕರಿಸಿ:
ಕೋವಿಡ್ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದೆ. ಕಳೆದ ಬಾರಿಯೂ ಕೊರೋನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ನಮ್ಮೊಂದಿಗೆ ಸಹಕಾರ ನೀಡಿದ್ದೀರಿ. ಪುತ್ತೂರಿನಲ್ಲಿ ಬೆಂಗಳೂರಿನಂತಹ ಪರಿಸ್ಥಿತಿ ಎದುರಾದರೆ ಈ ಬಾರಿಯು ಖಾಸಗಿ ಆಸ್ಪತ್ರೆಗಳು ನಮ್ಮೊಂದಿಗೆ ಸಹಕರಿಸುವಂತೆ ಶಾಸಕರು ಮನವಿ ಮಾಡಿದರು.
ಬ್ಲಡ್ ಕ್ಯಾಂಪ್:
ಕೊರೋನಾದ ಜೊತೆಗೆ ಮಲೇರಿಯಾ, ಡೆಂಘ್ಯು ಜ್ವರದ ಪ್ರಕರಣಗಳು ಕಂಡು ಬರುತ್ತಿದೆ. ಹೀಗಾಗಿ ತುರ್ತು ರಕ್ತದ ಆವಶ್ಯಕತೆಗಳು ಕಂಡು ಬರುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸುವಂತೆ ರೋಟರಿ ಕ್ಲಬ್, ಜೇಸಿಐ ಮೊದಲಾದ ಸಾಮಾಜಿಕ ಸಂಘಟನೆಗಳಿಗೆ ಮನವಿ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ವ್ಯಾಕ್ಸೀನ್ ಶಾರ್ಟೆಜ್:
ಪ್ರಥಮ ಹಂತವಾಗಿ ಕೊರೋನಾ ಲಸಿಕೆ ವಿತರಿಸಲಾಗಿದೆ. ಈಗ ಎರಡನೇ ಹಂತದ ಕೊರೋನಾ ಲಸಿಕೆಗಳಿಗೆ ಜನರಿಂದ ಸಾಕಷ್ಟು ಬೇಡಿಕೆಗಳು ಬರುತ್ತಿದೆ. ಆದರೆ ಜನರ ಬೇಡಿಕೆರಿದ್ದರೂ ಲಸಿಕೆಯ ಕೊರತೆಯಿದೆ ಎಂದು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರು ಶಾಸಕರ ಗಮನಕ್ಕೆ ತಂದರು.
ಆಮ್ಲಜನಕ ಬೇಡಿಕೆಯಿದ್ದರೆ ಮಾಹಿತಿ ನೀಡಿ:
ಪ್ರಸ್ತುತ ಪರಿಸ್ಥಿತಿಯಲ್ಲಿ ಪುತ್ತೂರಿನಲ್ಲಿ ಆಮ್ಲಜನಕದ ಕೊರತೆಯಿಲ್ಲ ಎಂದು ಖಾಸಗಿ ಆಸ್ಪತ್ರೆಗಳ ವೈದ್ಯರು ತಿಳಿಸಿದಾಗ, ಆಮ್ಲಜನಕಕ್ಕೆ ಹೆಚ್ಚಿನ ಬೇಡಿಕೆಗಳಿದ್ದರೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಜಿಲ್ಲಾ ಆರೋಗ್ಯ ಇಲಾಖೆ ಅಥವಾ ರಾಜ್ಯ ಆರೋಗ್ಯ ಇಲಾಖೆ ಮೂಲಕ ವಿತರಿಸಲು ಕ್ರಮಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು.
ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು, ವ್ಯಾಕ್ಸಿನ್ ಕೊರತೆ:
ಸರಕಾರಿ ಆಸ್ಪತ್ರೆಯಲ್ಲಿ ೨೬ ಕೋವಿಡ್ ಹಾಗೂ ೨೬ ಇತರ ಬೆಡ್‌ಗಳಿವೆ. ೩ ಡಬ್ಬಲ್ ಆಕ್ಸಿಜನ್ ಸಿಲಿಂಡರ್ ಸಂಗ್ರಹವಿದೆ. ೪ ವೆಂಟಿಲೇಟರ್ ಇದ್ದರೂ ವ್ಯದ್ಯರ ಕೊರತೆಯಿದೆ. ಎರಡನೇ ಹಂತದ ಲಸಿಕೆಗೆ ಜನರಿಂದ ಸಾಕಷ್ಟು ಬೇಡಿಕೆಗಳು ಬರುತ್ತಿದ್ದರು ಲಸಿಕೆಯ ಕೊರತೆಯಿದೆ ಎಂದು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ ತಿಳಿಸಿದರು.
66ಬೆಡ್ ರೆಡಿ:
ಸರಕಾರಿ ಆಸ್ಪತ್ರೆಯಲ್ಲಿ ೨೬ ಬೆಡ್, ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಪ್ರತ್ಯೇಕ ವಾರ್ಡ್‌ಗಳಲ್ಲಿ ಬೆಡ್, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಒಟ್ಟು ತಾಲೂಕಿನಲ್ಲಿ ೬೬ ಬೆಡ್ ಸಿದ್ದವಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ಮಾಹಿತಿ ನೀಡಿದರು.
ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪೌರಾಯುಕ್ತೆ ರೂಪಾ ಶೆಟ್ಟಿ ಹಾಗೂ ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರಗೆಳ ವೈದ್ಯರು ಸಭೆಯಲ್ಲಿ ಭಾಗವಹಿಸಿದ್ದರು.