ಮೊದಲ ಆರಂಭಿಕ ಕೊರೊನಾ ಹಂತವನ್ನು ಅವಲೋಕಿಸುವಾಗ ಈಗಿನ ಎರಡನೇ ಅಲೆಯು ತುಂಬಾ ವ್ಯತಿರಿಕ್ತವಾಗಿದೆ. ಮೊದಲು ಹುಲಿ ಊರಿಗೆ ಲಗ್ಗೆ ಇಟ್ಟಿದೆ ಎಂದು ವಾಲಗ ಊದಿ ಡಂಗುರ ಸಾರಿದ್ದೇ ಸಾರಿದ್ದು, ಆದರೆ ಹುಲಿ ಬಂದಿರಲಿಲ್ಲ. ಈಗ ನಿಜವಾಗಿಯೂ ಹುಲಿ ಬಂದಿದೆ. ಡಂಗುರವೂ ಇಲ್ಲ ವಾಲಗಕ್ಕೂ ಎಡೆ ಇಲ್ಲ. ಇದು ನಮ್ಮ ಆಡಳಿತಾತ್ಮಕ ವ್ಯವಸ್ಥೆಯ ಬೇಜವಾಬ್ದಾರಿ ನಿಲುವನ್ನು ತೋರ್ಪಡಿಸುತ್ತಿದೆ. ಆರಂಭಿಕ ಹಂತದ ಮುಂಜಾಗ್ರತಾ ಕ್ರಮಗಳನ್ನು ಕೈಬಿಟ್ಟು ರಾಜಾಕೀಯ ಕೂಟಗಳು, ಚುನಾವಣೆ, ಮುಷ್ಕರ ಮುಂತಾದ ದಟ್ಟ ಜನ ಸಮೂಹದ ಮೂಲಕ ಕೊಂಡಿ ಬೆಸೆಯುವ ಕಾರ್ಯ ನಡೆಯಿತಲ್ಲದೆ ಮಹಾಮಾರಿಯ ವಿನಾಶದೆಡೆಗೆ ಸ್ವಲ್ಪವೂ ಗಮನ ಹರಿಯದೆ ಇದ್ದದ್ದು ವಿಪರ್ಯಾಸವಾಗಿದೆ.
ಒಂದು ಸಲ ಸಂಪೂರ್ಣ ಸೋಲುಂಡು ಕಹಿ ರುಚಿ ಮಾಸೋ ಮುನ್ನವೇ ಅದೇ ಸೋಲಿಗೆ ಮತ್ತೆ ಆಹ್ವಾನ ನೀಡಿದಂತಾಗಿದೆ ನಮ್ಮ ಪರಿಸ್ಥಿತಿ. ರೋಗಿಗಳ ಜತೆ ಆಸ್ಪತ್ರೆಗಳು ನಡೆದುಕೊಳ್ಳುತ್ತಿರುವ ರೀತಿ, ಡಿಸಿ, ಎಸ್ಪೀ ಯವರಂತಹ ಉನ್ನತ ಶಿಕ್ಷಣ ದಾಟಿ ಬಂದ ಮೇಲ್ವರ್ಗದ ಅಧಿಕಾರಿಗಳೇ ಮುನ್ನೆಚ್ಚರಿಕಾ ನಿಯಮಗಳನ್ನು ಪಾಲಿಸದೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಅರ್ಹರಾಗಿರುವಾಗ ಕೊರೊನಾ ನಿಯಂತ್ರಣ ಸಾಧ್ಯವೇ?
ಅನಾನುಕೂಲತೆಯನ್ನು ಜನ ಸಾಮಾನ್ಯರೇ ಅನುಭವಿಸಬೇಕಾದ ನಿಟ್ಟಿನಲ್ಲಿ ಮಹಾಮಾರಿಯ ಕೊಂಡಿ ಕಳಚಿ ಬೇರ್ಪಡಿಸಲು ಹೋರಾಡಬೇಕಾದವರೂ ನಾವೇ ಆಗಿದ್ದೇವೆ. ಹಾಗಾಗಿ ಕೊರೊನಾ ನಿರ್ಮೂಲನೆ ಆಯಿತು ಎಂಬ ಭ್ರಮೆಯಿಂದ ಹೊರಬರಬೇಕಾದ ಈ ಸಂಧರ್ಭವನ್ನಾದರೂ ಬಳಸಿ ಮುನ್ನೆಚ್ಚರಿಕಾ ನಿಯಮಗಳನ್ನು ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಲ್ಲಿ ನಿಶ್ಚಿಂತೆಯ ದಿನಗಳನ್ನು ನಿರೀಕ್ಷಿಸಬಹುದೆಂಬ ಅನಿಸಿಕೆ..
🖋️. ಗಣೇಶ್ ರಾಜ್. ಬಿಳಿಯೂರು
ನಿಮ್ಮ ಅಭಿಪ್ರಾಯ ಬರೆಯಿರಿ ⏩ zoominputtur@gmail.com