ಬೆಂಗಳೂರು: ಗಗನಸಖಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಟೋಟಕ ಟ್ವಿಸ್ಟ್ ಸಿಕ್ಕಿದ್ದು, ತನ್ನನ್ನು ನೋಡಲು ಬಂದಿದ್ದ ಪ್ರಿಯತಮೆಯನ್ನು ಅಪಾರ್ಟ್‌ಮೆಂಟ್‌ನಿಂದ ತಳ್ಳಿ ಪ್ರಿಯಕರನೇ ಹತ್ಯೆ ಮಾಡಿರುವ ವಿಷಯ ಈಗ ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಕೇರಳದ ಆದೇಶ್, ಗಗನಸಖಿ ಅರ್ಚನಾ ಮಧ್ಯೆ ಮೂರು ವರ್ಷಗಳ ಹಿಂದೆ ಡೇಟಿಂಗ್ ಆಪ್‍ನಲ್ಲಿ ಪರಿಚಯವಾಗಿತ್ತು.
ಪರಿಚಯ ಕಾಲ ಕಳೆದಂತೆ ಪ್ರೀತಿಯಾಗಿ ಬದಲಾಗಿತ್ತು. ಕಳೆದ ಮೂರು ತಿಂಗಳಿನಿಂದ ಪ್ರಿಯಕರ ಆದೇಶ್, ಪ್ರಿಯತಮೆ ಅರ್ಚನಾಳ ಜೊತೆ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದ. ಆದೇಶ್ ಮೊದಲಿನಂತೆ ಮಾತನಾಡದ್ದಕ್ಕೆ ಬೇಸರಗೊಂಡಿದ್ದ ಹಿಮಾಚಲ ಪ್ರದೇಶದ ಮೂಲದ ಅರ್ಚನಾ ದುಬೈನಿಂದ ಗೆಳೆಯನನ್ನು ನೋಡಲು ಕೋರಮಂಗಲದ ನಾಲ್ಕನೇ ಹಂತದಲ್ಲಿರುವ ಮನೆಗೆ ಬಂದಿದ್ದಳು.
ಮಾರ್ಚ್ 10 ರಂದು ನಗರದ ಪ್ರತಿಷ್ಠಿತ ಪಬ್, ಹೋಟೆಲ್, ಸಿನಿಮಾ ಎಂದು ಸುತ್ತಾಡಿಸಿ ರಾತ್ರಿ ಮನೆಗೆ ಕರೆದುಕೊಂಡು ಹೋಗಿದ್ದ. ಈ ಸಂದರ್ಭದಲ್ಲಿ ಅರ್ಚನಾ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದ್ದಳು. ಈ ವಿಚಾರವಾಗಿ ಇಬ್ಬರ ಮಧ್ಯೆ ಜೋರು ಗಲಾಟೆ ನಡೆದಿದೆ.
ಈ ಗಲಾಟೆ ವಿಕೋಪಕ್ಕೆ ಹೋಗಿದ್ದರಿಂದ ರಾತ್ರಿ 12 ಗಂಟೆಯ ವೇಳೆಗೆ ಆದೇಶ್, ಅರ್ಚನಾಳನ್ನು ಜೋರಾಗಿ ಹಿಂದಕ್ಕೆ ತಳ್ಳಿದ್ದ. ಪರಿಣಾಮ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದ ಅರ್ಚನಾ ಸ್ಥಳದಲ್ಲೇ ಸಾವನ್ನಪ್ಪಿದ್ದಳು.
ಮೃತ ಯುವತಿ ತಂದೆ ದೇವರಾಜ್ ಅವರು ಬಹುಮಹಡಿ ಕಟ್ಟಡದಿಂದ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಆದೇಶ್ ವಿರುದ್ಧ ದೂರು ನೀಡಿದ್ದು, ಕೋರಮಂಗಲ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಆದೇಶ್‌ನನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.