ಪುತ್ತೂರು : ಹದಿನೇಳು ವರ್ಷದ ಹಿಂದೆ ಪಡೆದ ಎಡಿಬಿ ಸಾಲದ ಬಡ್ಡಿ ಬೃಹದಾಕರವಾಗಿ ಬೆಳೆಯುತ್ತಿದ್ದು, ಆ ಅನುದಾನ ಬಳಸಿ ಕಟ್ಟಿಡ ಕಟ್ಟಡಗಳು ಪ್ರಯೋಜನಕ್ಕೆ ಬಾರದ ಸ್ಥಿತಿಗೆ ತಲುಪಿದೆ. ಅಸಲು, ಬಡ್ಡಿ ಸೇರಿ ನಗರ ಸಭೆ ಅರ್ಧಶತ ಕೋ.ರೂ. ಮಿಕ್ಕಿ ಎಡಿಬಿ ಸಾಲದ ಹೊರೆ ಹೊತ್ತುಕೊಂಡಿದೆ.
ಅಭಿವೃದ್ಧಿ ಹಾಗೂ ಆದಾಯಕ್ಕೆ ಹೂಡಿಕೆ ದೃಷ್ಟಿಯಿಂದ ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ನಿಂದ( ಎಡಿಬಿ) 2003-04 ರಲ್ಲಿ ಪುತ್ತೂರು ಪುರಸಭೆ ಅವಧಿಯಲ್ಲಿ ಸಾಲ ಪಡೆದು ಅಭಿವೃದ್ಧಿ ಮತ್ತು ಹೂಡಿಕೆ ಎಂಬ ವಿಂಗಡಣೆ ಮಾಡಿತ್ತು. ಹೂಡಿಕೆ ಯೋಜನೆಗೆ ಶೇ. 4 ರಷ್ಟು ಬಡ್ಡಿ ನಿಗದಿ ಮಾಡಲಾಗಿತ್ತು. ಅನುಷ್ಠಾನದ ಹೊಣೆಯನ್ನು ಕುಡ್ಲೆಂಪ್ ಸಂಸ್ಥೆ ವಹಿಸಿತ್ತು. ಎಡಿಬಿಯ 58 ಕೋ. ರೂ. ನಲ್ಲಿ 18 ಕೋ. ರೂ. ಸಾಲದ ರೂಪದಲ್ಲಿ ಹಾಗೂ ಉಳಿದ ಮೊತ್ತ ಅನುದಾನದ ಮೂಲಕ ದೊರೆಯಿತು.
ಅಭಿವೃದ್ಧಿ ಕಾಮಗಾರಿ : ಒಟ್ಟು ಅನುದಾನ ಮತ್ತು ಸಾಲದಲ್ಲಿ ಕುಮಾರಧಾರ ನದಿಯ ಪೂರೈಕೆ ಯೋಜನೆ, ಪುರಸಭೆ ಕಟ್ಟಡ ಹಾಗೂ ತರಕಾರಿ ಮಾರುಕಟ್ಟೆ, ನಗರದ ರಸ್ತೆಗಳ ಅಭಿವೃದ್ಧಿ, ಬಸ್ ನಿಲ್ದಾಣದ ಬಳಿಯ ಹೂವಿನ ಮಾರುಕಟ್ಟೆ ಬಳಿ ವಾಣಿಜ್ಯ ಸಂಕೀರ್ಣ, ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣ, ದರ್ಬೆ-ಬೊಳುವಾರು-ಕಿಲ್ಲೆ ಮೈದಾನದಲ್ಲಿ ಸುಲಭ ಶೌಚಾಲಯದ ನಿರ್ಮಾಣ ಮೊದಲಾದ ಕಾಮಕಾರಿಗಳನ್ನು ಅನುಷ್ಠಾನಗೊಳಿಸಲಾಗಿತ್ತು.
ವಾಣಿಜ್ಯ ಸಂಕೀರ್ಣ : ಎಡಿಬಿ ಸಾಲದಲ್ಲಿ ಪುತ್ತೂರು ಬಸ್ ನಿಲ್ದಾಣದ ಬಳಿಯಲ್ಲಿನ ಮುಖ್ಯ ರಸ್ತೆ ಪಕ್ಕದಲ್ಲೇ 2 ಮಹಡಿಗಳ 31 ಅಂಗಡಿ ಕೋಣೆ ಹೊಂದಿರುವ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ.
50 ಕೋ. ರೂ. ಏರಿಕೆ : ಎಡಿಬಿ ಮೂಲಕ ದೊರೆತ 58 ಕೋಟಿ ರೂ. ಗಳಲ್ಲಿ ಕೆಲವು ಯೋಜನೆಗಳಿಗೆ ಶೇ.50 ಮತ್ತು ಬೇರೆ ಯೋಜನೆಗಳಿಗೆ ಶೇ.100 ರಷ್ಟು ಅನುದಾನ ದೊರೆತಿದೆ. ಇವುಗಳನ್ನು ಹೊರತುಪಡಿಸಿ ಸುಮಾರು 18 ಕೋ. ರೂ ಸಾಲ ಇತ್ತು. 2017 ರಲ್ಲಿ ಈ ಸಾಲದ ಪ್ರಮಾಣಕ್ಕೆ ಬಡ್ಡಿ ಸೇರಿ 33.57 ಕೋ. ರೂ. ಗೆ ಏರಿತ್ತು. ಕಳೆದ ಮೂರು ವರ್ಷದ ಬಡ್ಡಿ, ಅಸಲು ಮೊತ್ತ ಸೇರಿದರೆ ಅದು 50 ಕೋ. ರೂ ದಾಟಿದೆ ಎನ್ನುವ ಮಾಹಿತಿ ನಗರಸಭೆ ಮೂಲಗಳಿಂದ ದೊರೆತಿದೆ.
ಉಳಿಸುವಂತಿಲ್ಲ ಕೆಡಹುವಂತಿಲ್ಲ : ನಗರದ ಹೂವಿನ ಮಾರುಕಟ್ಟೆ ಬಳಿ ನಿರ್ಮಿಸಿದ 31 ಕೊಠಡಿಗಳ ವಾಣಿಜ್ಯ ಸಂಕಿರ್ಣ ಕಟ್ಟಡವಂತೂ ಹೆಚ್ಚು ದಿನ ಬಾಳಿಕೆ ಬರುವುದು ಅನುಮಾನ ಎಂಬ ಸ್ಥಿತಿಯಲ್ಲಿದೆ. ಖಾಸಗಿ ಬಸ್ ನಿಲ್ದಾಣದ ಕಥೆಯೂ ಇದೇ ತೆರನಾಗಿದೆ. ಹಳೆ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ಕಟ್ಟಲು ಸಾಧ್ಯವಾಗುತ್ತಿಲ್ಲ, ಸಾಲದ ಮೊತ್ತ ಪಾವತಿಯಾಗದ ಕಾರಣ ನಗರಸಭೆ ಅದರ ಮೇಲೆ ಅಧಿಕಾರ ಚಲಾಯಿಸುವಂತಿಲ್ಲ, ಹೀಗಾಗಿ ಶಿಥಿಲಗೊಂಡರೂ ಉಳಿಸಲಾಗದ, ಕೆಡವಲಾಗದ ಸಂದಿಗ್ಧ ಸ್ಥಿತಿ ಎದುರಾಗಿದೆ.