ಪುತ್ತೂರು : ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಕ್ಷೇತ್ರಿಯ ಸಂಘಟನಾ ಪ್ರಮುಖ್ ರಾದ ಜಗದೀಶ್ ಕಾರಂತ್ ರವರು ಕೊರೊನಾ ಖಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಸುಳ್ಳು ಸುದ್ಧಿ ಹಬ್ಬಿಸಿದ ಆರೋಪಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಿಂದೂ ಜಾಗರಣ ವೇದಿಕೆ ಎಂಬುದು ಸಮಾಜಮುಖಿ ಸಂಘಟನೆಯಾಗಿದ್ದು, ಕೊರೊನಾ ವೈರಸ್ ಖಾಯಿಲೆ ಕಾಡುತ್ತಿರುವ ಈ ಸಂಕಷ್ಟ ಸಂದರ್ಭದಲ್ಲಿ ಜಾತಿ, ಮತ ಭೇದವನ್ನು ನೋಡದೆ ರಾತ್ರಿ ಹಗಲು ಎಂದು ಯೋಚಿಸದೆ ರೋಗಿಗಳ ಸೇವೆ ಮಾಡಿರುವ ಸಂಘಟನೆಯಾಗಿದೆ. ಜಗದೀಶ್ ಕಾರಂತ್ ರವರು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಕ್ಷೇತ್ರಿಯ ಸಂಘಟನಾ ಪ್ರಮುಖ್ ರಾಗಿದ್ದು, ಸರ್ವಸ್ವವನ್ನು ಸಮಾಜಕ್ಕೆ ಅರ್ಪಿಸಿಕೊಂಡ ಮಹಾನ್ ವ್ಯಕ್ತಿಯಾಗಿದ್ದಾರೆ ಮತ್ತು ನಿಸ್ವಾರ್ಥವಾಗಿ ದೇಶ ಸೇವೆ ಮಾಡಿರುವಂತಹ ಒಬ್ಬ ದೇಶ ಭಕ್ತನಾಗಿರುತ್ತಾರೆ. ಈಗೀರುವಾಗ ಎ.28 ರಂದು ವಾಟ್ಸಪ್ ಗ್ರೂಪ್ ನಲ್ಲಿ “ಬ್ರೇಕಿಂಗ್ ನ್ಯೂಸ್ : ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್ ನಿಧನ,ಕೊರೊನಾ ಭಾದಿಸಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಆಕ್ಸಿಜನ್ ಕೊರತೆಯಿಂದ ಬಳಲುತ್ತಿರುವ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದ ಅರ್ಧ ಗಂಟೆಗೆ ಅಸುನೀಗಿದ್ದಾರೆ” ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಘಟಕವು ಸುದ್ದಿಯನ್ನು ನೀಡಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ. ಸತ್ಯ ವಿರುದ್ಧವಾದ ಈ ಪ್ರಕಟಣೆಯನ್ನು ನಾವು ನೀಡಿರುವುದಿಲ್ಲ ಎಂದು ದೂರಿನಲ್ಲಿ ಹಿಂ. ಜಾ. ವೇ ಪುತ್ತೂರು ಘಟಕ ತಿಳಿಸಿದೆ.
ಕೋವಿಡ್-19 ನಂತಹ ಮಹಾಮಾರಿಯಿಂದ ಸಮಾಜ ಕಂಗೆಟ್ಟಿರುವಾಗ ಜನರನ್ನು ಮತ್ತಷ್ಟು ಧೃತಿಗೆಡಿಸುವ ಮತ್ತು ಅವರ ಆತ್ಮಸೈರ್ಯ ಕುಗ್ಗಿಸುವ, ಸಮಾಜದ ಭಿನ್ನ ಕೋಮುಗಳ ಮಧ್ಯದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಸಾಮಾಜಿಕ ಸ್ವಾಸ್ತ್ಯ ಹಾಳು ಕೆಡವುವ ಉದ್ದೇಶವಾಗಿದೆ. ಈ ಹಿಂದೆ ಪುತ್ತೂರಿನ ಹಿಂದೂ ಐಕ್ಯತಾ ಸಮಾವೇಶ ನಡೆದ ಸಂದರ್ಭದಲ್ಲೂ ಜಗದೀಶ್ ಕಾರಂತ್ ರವರು ಭಾಷಣ ಮಾಡುತ್ತಾ ವೇದಿಕೆಯಲ್ಲಿ ಕುಸಿದು ಮೃತಪಟ್ಟಿದ್ದಾರೆಂದು ಸುಳ್ಳು ಸುದ್ಧಿ ರವಾನಿಸಲಾಗಿತ್ತು. ಈಗ ಮತ್ತೆ ಅದೇ ರೀತಿ ಪ್ರಯತ್ನವನ್ನು ಮಾಡಲಾಗುತ್ತಿದೆ. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಂಡು ನಮಗೆ ನ್ಯಾಯ ಒದಗಿಸಬೇಕಾಗಿ ದೂರಿನಲ್ಲಿ ಅವರು ತಿಳಿಸಿದ್ದಾರೆ.