ಪುತ್ತೂರು: ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಇಡೀ ರಾಜ್ಯವೇ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಬಂದ್ ಆಗಿದ್ದರೂ ಪುತ್ತೂರು ನಗರದ ಗೂಡಂಗಡಿಯೊಂದಲ್ಲಿ ಮದ್ಯ ಸೇವಿಸುತ್ತಿದ್ದ ಪಾನ ಪ್ರಿಯರಿಬ್ಬರಿಗೆ ನಗರಸಭಾ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ನೇತೃತ್ವದ ಕೋವಿಡ್ ಮಾರ್ಷಲ್‌ಗಳ ತಂಡ ಎಚ್ಚರಿಕೆ ನೀಡಿ ಕಳುಹಿಸಿದ ಘಟನೆ ಮೆ.2ರಂದು ಬೆಳಿಗ್ಗೆ ನಡೆದಿದೆ.
ಪಶು ಸಂಗೋಪನಾ ಇಲಾಖೆಯ ಮುಂಭಾಗದಲ್ಲಿರುವ ಸಣ್ಣ ಗೂಡಂಗಡಿಯೊಂದರ ಬಾಗಿಲು ತೆರೆದು ವ್ಯಕ್ತಿಗಳಿಬ್ಬರು ಬೆಳಿಗ್ಗಿನ ವೇಳೆಯೇ ಮದ್ಯ ಸೇವನೆಯಲ್ಲಿ ತೊಡಗಿದ್ದರು. ನಗರಸಭಾ ಆರೋಗ್ಯ ನಿರೀಕ್ಷಕಿ ಶ್ವೇತಾಕಿರಣ್ ಹಾಗೂ ಕೋವಿಡ್ ಮಾರ್ಷಲ್‌ಗಳು ನಗರದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಂದರ್ಭದಲ್ಲಿ ಗೂಡಂಗಡಿ ಶಟರ್ ತೆರೆದು ಮದ್ಯ ಸೇವಿಸುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಅವರು ಮದ್ಯಪಾನ ಮಾಡುತ್ತಿರುವವರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದರು. ಆದರೆ, ಮದ್ಯದ ಅಮಲಿನಲ್ಲಿದ್ದವರಿಗೆ ಸುಲಭವಾಗಿ ಅಂಗಡಿ ಒಳಗಿಂದ ಹೊರ ಬರುವುದು ಸಾಧ್ಯವಾಗಲಿಲ್ಲ. ತೂರಾಡುತ್ತಾ ಹೊರಬಂದ ಅವರನ್ನು ಎಚ್ಚರಿಕೆ ನೀಡಿ ಕಳುಹಿಸಿರುವುದಾಗಿ ತಿಳಿದು ಬಂದಿದೆ.