ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಿಯ ತನಕ ಕೊರೋನಾ ಸೋಂಕಿತರು ದಾಖಲಾಗಿರುತ್ತಾರೋ ಅಲ್ಲಿಯ ತನಕ ನಿರಂತರ ಹಣ್ಣು ಹಂಪಲುಗಳನ್ನೊಳಗೊಂಡ ಪೌಷ್ಠಿಕ ಆಹಾರ ನೀಡುವಲ್ಲಿ ಕಳೆದ ವರ್ಷ ಆರಂಭಿಸಿದ ಪುತ್ತೂರಿನ ಇ ಫ್ರೆಂಡ್ಸ್ ಈ ವರ್ಷವು ಕೊರೋನಾ 2ನೇ ಅಲೆಯಲ್ಲೂ ಮುಂದುವರಿಸಿದ್ದು, ಮೇ .4ರಂದು ಸಂಜೆ ಶಾಸಕ ಸಂಜೀವ ಮಠಂದೂರು ಅವರ ಮೂಲಕ ಬೀದಿ ಬದಿಯ ಭಿಕ್ಷುಕರಿಗೆ ಬೆಡ್‌ಶೀಟ್ ಮತ್ತು ಆಹಾರ ಒದಗಿಸುವ ಕಾರ್ಯ ಮಾಡಲಾಯಿತು.
ದೀನರು, ದುರ್ಬಲರು ಅಬಲರ ಸೇವೆ ಮಾಡುವ ಶಕ್ತಿ ಇ ಫ್ರೆಂಡ್ಸ್‌ಗೆ ಸಿಗಲಿ:
ಶಾಸಕ ಸಂಜೀವ ಮಠಂದೂರು ಅವರು ಇ ಫ್ರೆಂಡ್ಸ್ ಕೊಡ ಮಾಡಿದ ಸೊತ್ತುಗಳನ್ನು ಭಿಕ್ಷುಕರಿಗೆ ವಿತರಿಸಿದರು. ಬಳಿಕ ಅವರು ಮಾತನಾಡಿ ಹಸಿದವನಿಗೆ ಅನ್ನ ಕೊಡುವುದು ದೊಡ್ಡ ಧರ್ಮ. ಅದೇ ರೀತಿ ಅನಾರೋಗ್ಯ ಪೀಡಿತರಿಗೆ ಮಾನವೀಯತೆ ನೆಲೆಯಲ್ಲಿ ಸಹಕಾರ ನೀಡುವಂತಹ ಮಹತ್ವದ ಸೇವೆಯನ್ನು ಇ ಫ್ರೆಂಡ್ಸ್ ತಂಡ ಮಾಡಿರುವುದು ಮಾದರಿ ಕೆಲಸವಾಗಿದೆ. ಖಾಯಿಲೆ ಬಂದಾಗ ವೈದ್ಯರು ಚಿಕಿತ್ಸೆ ನೀಡುತ್ತಾರೆ. ದಾದಿಯರು ಸುಶ್ರುಶಕರು ಆರೈಕೆ ಮಾಡುತ್ತಾರೆ. ಆದರೆ ಇವತ್ತು ಕೋವಿಡ್ ರೋಗಿಯ ಆರೈಕೆ ಮಾಡುವ ಕಷ್ಟದ ಸಂದರ್ಭದಲ್ಲೂ ಆರೋಗ್ಯ ಇಲಾಖೆ ಉತ್ತಮ ಸೇವೆ ನೀಡುತ್ತಿದೆ. ಇದರ ಜೊತೆ ರೋಗಿಗಳಿಗೆ ಒಂದಷ್ಟು ಪೌಷ್ಠಿಕ ಆಹಾರ ತೆಗೆದುಕೊಂಡರೆ ರೋಗ ನಿರೋಧ ಶಕ್ತಿವೃದ್ಧಿಸಲು ಸಹಕಾರಿಯಾಗುತ್ತದೆ. ಇದನ್ನು ಮನಗಂಡು ಇ ಫ್ರೆಂಡ್ಸ್ ಸಮಾಜಮುಖಿ ಕೆಲಸ ಮಾಡುತ್ತಿರುವ ಜೊತೆಗೆ ರಸ್ತೆ ಬದಿಯ ಬಿಕ್ಷುಕರಿಗೂ ಬೆಡ್‌ಶೀಟ್ ಮತ್ತು ಉತ್ತಮ ಆಹಾರ ನೀಡುವ ಕಾರ್ಯ ಆರಂಭಿಸಿರುವುದು ಉತ್ತಮ ಕಾರ್ಯವಾಗಿದೆ. ಅವರಿಗೆ ಭಗವಂತ ಇಂತಹ ಸೇವೆ ಮಾಡಲು ಇನ್ನಷ್ಟು ಶಕ್ತಿ ಕೊಡಲಿ ಎಂದರು.
ಕೋವಿಡ್ ಆರಂಭದಲ್ಲೇ ಸಂಕಷ್ಟದವರಿಗೆ ಸಹಕಾರ:
ಇ ಫ್ರೆಂಡ್ಸ್‌ನ ಅಧ್ಯಕ್ಷ ಡಾ. ಸರ್ಫಾಜ್ ಅವರು ಮಾತನಾಡಿ ಕೋವಿಡ್ ಆರಂಭ ಆಗುವ ಸಂದರ್ಭ ಲಾಕ್‌ಡೌನ್‌ಗೆ ಮುಂಚೆಯೇ ಇ ಫ್ರೆಂಡ್ಸ್ ತಂಡ ಸಮಾಜದ ಸಂಕಷ್ಟದ ಜನರಿಗೆ ಸ್ಪಂಧನೆ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿ, ನಿರ್ಗತಿಕರನ್ನು ಹುಡುಕಿ ಅವರಿಗೆ ಕಿಟ್ ಕೊಡುವ ಕೆಲಸ ಮಾಡಿದೆ. ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದ ಕೊರತೆ ಉಂಟಾದಾಗಲು ಎರಡು ಬಾರಿ ರಕ್ತದಾನ ಮಾಡಿದ್ದೇವೆ. ಸದಾ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಕ್ಕೆ ಪೂರ್ಣ ಸಹಕಾರ ನೀಡುವ ನಮ್ಮ ತಂಡ ಕೋವಿಡ್ ಸಂದರ್ಭದಲ್ಲಿ ಕೋವಿಡ್ ರೋಗಿಗಳ ಧೈರ್ಯ ತುಂಬುವ ಕೆಲಸಕ್ಕೆ ಆದ್ಯತೆ ನೀಡುವ ಮೂಲಕ ಸರಕಾರಿ ಅಸ್ಪತ್ರೆಯಲ್ಲಿ ಇರುವ ಕೊರೋನಾ ರೋಗಿಗಳಿಗೆ ನಿರಂತರ ಹಣ್ಣುಹಂಪಲುಗಳನ್ನು ನೀಡುತ್ತಿದ್ದೇವೆ. ಇವತ್ತು ರಸ್ತೆ ಬದಿಯ ಬಿಕ್ಷುಕರಿಗೆ ಬೆಡ್‌ಶೀಟ್‌ಗಳನ್ನು ನೀಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಶಾಸಕರ ವಾರ್ ರೂಮ್‌ನ ಪ್ರಮುಖ್ ಸಾಜ ರಾಧಾಕೃಷ್ಣ ಆಳ್ವ, ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಾಜೇಶ್ ಬನ್ನೂರು, ರಫೀಕ್ ದರ್ಬೆ, ಇ ಫ್ರೆಂಡ್ಸ್‌ನ ಸದಸ್ಯರಾದ ಹರ್ಷಾದ್ ದರ್ಬೆ, ನೌಶಾದ್ ಕೂರ್ನಡ್ಕ, ಅಬ್ದುಲ್ ಶುಕೂರ್, ಬಶೀರ್ ದರ್ಬೆ, ಶಾಕೀರ್ ಮತ್ತಿತರರು ಉಪಸ್ಥಿತರಿದ್ದರು.
ಭಿಕ್ಷಕುರಿಗೆ ನೆಲ್ಲಿಕಟ್ಟೆ ಶಾಲೆಯಲ್ಲಿ ಆಶ್ರಯ
ಕೋವಿಡ್ ಸಂದರ್ಭದಲ್ಲಿ ಭಿಕ್ಷುಕರು ರಸ್ತೆ ಬದಿಯಲ್ಲಿ ಇರುವುದು ಸರಿಯಲ್ಲ. ಅವರಿಗೆ ಸರಿಯಾದ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಕಳೆದ ವರ್ಷದಂತೆ ನೆಲ್ಲಿಕಟ್ಟೆ ಶಾಲೆಯಲ್ಲಿ ಆಶ್ರಯ ನೀಡುವಂತೆ ಈಗಾಗಲೇ ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರಿಗೆ ತಿಳಿಸಿದ್ದೇನೆ. ಮುಂದೆ ಅಲ್ಲಿ ಅವರಿಗೆ ನಿರಂತರ ಊಟ ಉಪಚಾರ ನೀಡಲಾಗುತ್ತದೆ – ಸಂಜೀವ ಮಠಂದೂರು, ಶಾಸಕರು ಪುತ್ತೂರು