ಬೆಂಗಳೂರು : ಬೆಡ್ ಬುಕ್ಕಿಂಗ್ ಹಗರಣ ಕುರಿತು ರಾಷ್ಟ್ರೀಯ ತನಿಖಾ ದಳಕ್ಕೆ ಈ ಪ್ರಕರಣವನ್ನು ವಿಚಾರಣೆಗೆ ಒಪ್ಪಿಸಬೇಕೆಂದು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪನವರಿಗೆ ಕರ್ನಾಟಕ ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ಕೋವಿಡ್ ಅಲೆಯ ಸಂಕಷ್ಟದ ಸಂದರ್ಭದಲ್ಲಿ ಅಶಾಂತಿಯನ್ನು ಹುಟ್ಟು ಹಾಕಿ ಅರಾಜಕತೆಯನ್ನು ಸೃಷ್ಟಿಸಲು ದಂಗೆಯ ಮಾದರಿಯ ಕೃತ್ಯಗಳನ್ನು ಬೆಂಗಳೂರಿನಲ್ಲಿ ನಡೆಸಿದ್ದ ಅನ್ಯಕೋಮಿನ ಶಕ್ತಿಗಳು ಆಡಳಿತ ಯಂತ್ರದ ಒಳಗೇ ನುಸುಳಿ ಸಾಮಾಜಿಕ ಅಲ್ಲೋಲಕಲ್ಲೋಲ ಉಂಟು ಮಾಡಿ, ಕೋಲಾಹಲವನ್ನೆಬ್ಬಿಸಿ ಹೊಸ ಮಾದರಿಯ ದಂಗೆಗೆ ದಾರಿಮಾಡಿಕೊಡುವ ಕೃತ್ಯವನ್ನು ನಡೆಸಿರುವುದು ದೇಶದ್ರೋಹ ಮಹಾಪರಾಧವಾಗಿದೆ.
ರಾಜ್ಯ ಸರ್ಕಾರವು ಪ್ರಕರಣದ ಗಂಭೀರತೆಯನ್ನು ಅರ್ಥಮಾಡಿಕೊಂಡು “ರಾಜದ್ರೋಹ” ದ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕೆಂದು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ನರವರಿಗೆ ಕರ್ನಾಟಕ ಹಿಂದೂ ಜಾಗರಣ ವೇದಿಕೆಯು ಆಗ್ರಹಿಸಿದೆ.
ರಾಜ್ಯ ಸರ್ಕಾರವು ಈ ಘಟನೆಯನ್ನು ಒಂದು ಸಾಧಾರಣ ಭ್ರಷ್ಟಾಚಾರದ ‘ದುಡ್ಡು ಮಾಡುವ ದಂಧೆ’ ಎಂದು ಪರಿಗಣಿಸದೆ ಸಮಾಜದಲ್ಲಿ ಅಶಾಂತಿಯನ್ನು ಹುಟ್ಟುಹಾಕಿ ಜನಸಾಮಾನ್ಯರಲ್ಲಿ ಆಕ್ರೋಶವನ್ನು ಸೃಷ್ಟಿಸಿ, ಅರಾಜಕತೆಯನ್ನು ನಿರ್ಮಾಣಮಾಡುವ
‘ದೇಶದ್ರೋಹ’ದ ಅಸಾಧಾರಣ ಕೃತ್ಯವೆಂದು ಪರಿಗಣಿಸಿ ದಿಟ್ಟ ಕ್ರಮಕ್ಕೆ ಮುಂದಾಗಬೇಕೆಂದು ರಾಜ್ಯ ಸರ್ಕಾರವನ್ನು ಹಿಂದೂ ಜಾಗರಣ ವೇದಿಕೆಯು ಒತ್ತಾಯಿಸಿದೆ.