ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ಬಳಿಕ ನಡೆದ ಹಿಂಸಾಚಾರಕ್ಕೆ ಕಾರಣ ಏನು ಎನ್ನುವುದನ್ನು ಪತ್ತೆ ಮಾಡಿ ತನಿಖೆ ನಡೆಸಲು ಗೃಹ ಸಚಿವಾಲಯ ನಾಲ್ಕು ಸದಸ್ಯರ ತಂಡವನ್ನು ರಚಿಸಿದೆ.
ಈಗಾಗಲೇ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದ ತಂಡ ಪಶ್ಚಿಮಬಂಗಾಳಕ್ಕೆ ತೆರಳಿದ್ದು, ತಂಡಕ್ಕೆ ಹಿಂಸಾಚಾರದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಈ ರೀತಿಯಾದ ಘಟನೆಗಳು ಮತ್ತೆ ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಶ್ಚಿಮಬಂಗಾಳ ಸರ್ಕಾರಕ್ಕೆ ಗೃಹಸಚಿವಾಲಯ ಬುಧವಾರ ಪತ್ರ ಬರೆದಿತ್ತು. ರಾಜ್ಯವು ಕ್ರಮ ತಕೈಗೊಳ್ಳಲು ವಿಫಲವಾದಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.
ಘಟನೆಯ ಬಗ್ಗೆ ಬಿಜೆಪಿ ಆರೋಪಿಸಿದ್ದು, “ತನ್ನ ಹಲವು ಕಾರ್ಯಕರ್ತರನ್ನು ಟಿಎಂಸಿ ಗೂಂಡಾಗಳು ಹತ್ಯೆ ಮಾಡಿದ್ದಾರೆ. ಅಲ್ಲದೇ, ಮಹಿಳಾ ಸದಸ್ಯರ ಮೇಲೂ ಕೂಡಾ ಹತ್ಯೆ ಮಾಡಿದ್ದಾರೆ” ಎಂದಿದೆ.
“ಚುನಾವಣಾ ಫಲಿತಾಂಶದ ಬಳಿಕ ನಡೆದ ಹಿಂಸಾಚಾರದಲ್ಲಿ ಕನಿಷ್ಠ 14 ಮಂದಿ ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈಯಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಮನೆ ತೊರೆದಿದ್ದಾರೆ. ಮಮತಾ ಬ್ಯಾನರ್ಜಿ ಅವರು ಹಿಂಸಾಚಾರದ ಬಗ್ಗೆ ಮೌನವಹಿಸಿರುವುದನ್ನು ನೋಡಿದರೆ ಅವರು ಈ ಕೃತ್ಯದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಯುತ್ತದೆ” ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಆರೋಪಿಸಿದ್ದರು.
ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಮಮತಾ ಬ್ಯಾನರ್ಜಿ ಅವರು, “ಬಿಜೆಪಿ ಗೆದ್ದಿರುವ ಕ್ಷೇತ್ರಗಳಲ್ಲೇ ಈ ಹಿಂಸಾಚಾರ ನಡೆದಿದೆ” ಎಂದಿದ್ದರು.