ವಿಟ್ಲ : ಕೇರಳದ ಕೊಳಚೆ ಕೆಮಿಕಲ್ ಮಿಶ್ರಿತ ನೀರನ್ನು ಚೆಲ್ಲಡ್ಕ ಅಮೈ ಬಳಿಯ ಹಳ್ಳಕ್ಕೆ ನಿರಂತರವಾಗಿ ಬಿಡುವ ವಾಹನ ಸಮೇತ ಚಾಲಕನನ್ನು ಸಾರ್ವಜನಿಕರು ಹಿಡಿದ ಘಟನೆ ಕೆಲ ಸಮಯದ ಹಿಂದಷ್ಟೇ ನಡೆದಿದ್ದು, ಇದೀಗ ಮತ್ತೊಂದು ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ.
ನಿನ್ನೆ ರಾತ್ರಿ ಉಕ್ಕುಡ ಸಮೀಪ ಕೇರಳದ ಶೌಚಾಲಯದ ಕೊಳಚೆ ನೀರನ್ನು ಹಳ್ಳಕ್ಕೆ ಬಿಡಲು ಬಂದಿದ್ದ ವೇಳೆ ಸಾರ್ವಜನಿಕರು ರೆಡ್ ಹ್ಯಾಂಡಾಗಿ ಹಿಡಿದ ಘಟನೆ ನಡೆದಿದೆ.

ಪದೇ ಪದೇ ಕೇರಳದ ಶೌಚಾಲಯದ ಕೊಳಚೆ ನೀರನ್ನು ವಿಟ್ಲ ಸಮೀಪ ತಂದು ಸುರಿಯುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶಿತರಾಗಿದ್ದು, ಈ ಬಗ್ಗೆ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ ಎಂದು ವರದಿಯಾಗಿದೆ.
ಸ್ಥಳದಲ್ಲಿ ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವ್ ಮಣಿಯಾಣಿ, ರಾಜೇಶ್ ಕರವೀರ ಸಹಿತ ಹಲವರು ಉಪಸ್ಥಿತರಿದ್ದು, ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಕೊಳಚೆ ನೀರನ್ನು ತಂದು ಸುರಿಯುವ ವಾಹನವನ್ನು ಸೀಜ್ ಮಾಡುವಂತೆ ಆಗ್ರಹಿಸಿದ್ದಾರೆನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನ ಸಹಿತ ಚಾಲಕನನ್ನು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.